

ಕುರುಗೋಡು: ಕೋಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಎಐಡಿಎಸ್‌ಒ ಸಂಘಟನೆ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶುಕ್ರವಾರ ಗ್ರಾಪಂ ಮುಂದೆ ಪ್ರತಿಭಟನೆ ಮಾಡಿ, ಪಿಡಿಒ ಜುಬೇದಾಗೆ ಮನವಿ ಸಲ್ಲಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಕೆ.ಈರಣ್ಣ ಮಾತನಾಡಿ, ಕೋಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5 ರಿಂದ 8ನೇ ತರಗತಿ ವರೆಗೆ 200ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ಬಡವರಿದ್ದಾರೆ.
ಆದರೆ, ಶಾಲೆಗೆ ಸ್ವಂತ ಕಟ್ಟಡ ಜತೆಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶೌಚಗೃಹ ಇಲ್ಲ. ಇದರಿಂದಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಪ್ರಾಥಮಿಕ ಶಾಲೆ ಪಕ್ಕದ ಸರ್ಕಾರಿ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿದರು. ಎಐಡಿಎಸ್‌ಒ ಉಪಾಧ್ಯಕ್ಷೆ ಎಂ.ಶಾಂತಿ, ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ, ಗ್ರಾಮದ ಮುಖಂಡರು, ಪಾಲಕರು ಇದ್ದರು.