ಕುರುಗೋಡಿನಲ್ಲಿ ಇಲ್ಲ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು

Kurugodu Taluk Map
Published on

ಕುರುಗೋಡು: ನೂತನ ತಾಲೂಕು ಕೇಂದ್ರವಾಗಿರುವ ಕುರುಗೋಡಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಬೇಕು ಎಂಬುದು ದಶಕದ ಬೇಡಿಕೆಯಾಗಿದೆ. ಆದರೆ, ಈವರೆಗೆ ಯಾವುದೇ ಪ್ರಕ್ರಿಯೆ ನಡೆಯದಿರುವುದು ಈ ಭಾಗದ ವಿದ್ಯಾರ್ಥಿಗಳು, ಪಾಲಕರ ಬೇಸರಕ್ಕೆ ಕಾರಣವಾಗಿದೆ.

ಪಟ್ಟಣ ಶೈಕ್ಷಣಿಕವಾಗಿ ಬೆಳೆಯುತ್ತಿದೆ. ತಾಲೂಕಿನಲ್ಲಿ ಹೊಸದಾಗಿ ಆರಂಭವಾಗುತ್ತಿರುವ ಸರ್ಕಾರಿ ಹಾಗೂ ಖಾಸಗಿ ಶಾಲೆ, ಕಾಲೇಜುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಬಹುತೇಕ ಪ್ರಾಥಮಿಕ, ಪ್ರೌಢಶಾಲೆಗಳು ಹೆಚ್ಚಾಗಿ ಆರಂಭವಾಗುತ್ತಿವೆ.

ಸರ್ಕಾರಿ ಪಪೂ ಕಾಲೇಜು ಒಂದೇ ಇದ್ದು, ಖಾಸಗಿ ಕಾಲೇಜುಗಳ ಸಂಖ್ಯೆ ಅಧಿಕವಾಗಿದೆ. ಸಾಮಾನ್ಯ, ಬಡವರು ಸರ್ಕಾರಿ ಕಾಲೇಜಿಗೆ ದಾಖಲಾಗುತ್ತಾರೆ.ಆರ್ಥಿಕವಾಗಿ ಸಬಲರಾಗಿರುವವರು ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿವೆ. ಹಲವು ವರ್ಷಗಳ ಹೋರಾಟದ ಫಲವಾಗಿ ಕುರುಗೋಡಿನಲ್ಲಿ ಸರ್ಕಾರಿ ಐಟಿಐ ಕಾಲೇಜು ಆರಂಭಗೊಂಡಿದೆ. ಆದರೆ, ಪಾಲಿಟೆಕ್ನಿಕ್ ಕಾಲೇಜು ಆರಂಭದ ಬೇಡಿಕೆ ಈವರೆಗೆ ಈಡೇರಿಲ್ಲ.

ವೃತ್ತಿಪರ ಕೋರ್ಸ್ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಬಳ್ಳಾರಿ, ಸಿರಗುಪ್ಪ ಹಾಗೂ ಕಂಪ್ಲಿಯಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಹೋಗಬೇಕು. ಎಲ್ಲ ಊರುಗಳು ದೂರವಿದ್ದು, ಬಸ್ ವ್ಯವಸ್ಥೆ ಸಮರ್ಪಕವಾಗಿ ಇರದ ಕಾರಣ ಕೆಲವರು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದರೆ, ಉಳಿದವರು ಪಟ್ಟಣದ ಸರ್ಕಾರಿ ಕಾಲೇಜು ಸೇರುತ್ತಿದ್ದಾರೆ.

ಕುರುಗೋಡು ಪಟ್ಟಣದಲ್ಲಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಿದಲ್ಲಿ ಕೇಂದ್ರಕ್ಕೆ ಹತ್ತಿರವಿರುವ ಕಲ್ಲುಕಂಬ, ಗೆಣಿಕೆಹಾಳು, ಎಚ್.ವೀರಾಪುರ, ಸಿದ್ದಮ್ಮನಹಳ್ಳಿ, ವದ್ದಟ್ಟಿ, ಬಾದನಹಟ್ಟಿ, ಗುತ್ತಿಗನೂರು, ಸಿರಿಗೇರಿ, ಎಮ್ಮಿಗನೂರು ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಅಲ್ಲದೆ ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಸೇರಿದಂತೆ ನೂರಾರು ಕಾರ್ಖಾನೆಗಳಿದ್ದು, ಕೆಲಸ ಸಿಗಬಹುದು. ಆದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಳಜಿವಹಿಸಿ ಪಾಲಿಟೆಕ್ನಿಕ್ ಕಾಲೇಜು ಆರಂಭಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಕುರುಗೋಡಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸುವಂತೆ ಈ ಹಿಂದೆ ಶಾಸಕರಾಗಿದ್ದ ಟಿ.ಎಚ್.ಸುರೇಶ್ ಬಾಬು ಅವರಿಗೆ ಮನವಿ ಸಲ್ಲಿಸಿದ್ದೆವು, ಆದರೆ, ಈವರೆಗೆ ಆರಂಭವಾಗಲಿಲ್ಲ. ಈಗಿರುವ ಶಾಸಕ ಜೆ.ಎನ್.ಗಣೇಶ್ ಮುತುವರ್ಜಿ ವಹಿಸಿ ಕಾಲೇಜು ಆರಂಭಕ್ಕೆ ಶ್ರಮಿಸಬೇಕು.| ಎಚ್.ಎಂ.ವಿಶ್ವನಾಥ ಸ್ವಾಮಿ ಸ್ಥಳೀಯ ನಿವಾಸಿ, ಕುರುಗೋಡು ಕಂಪ್ಲಿಯಲ್ಲಿ ಸರ್ಕಾರಿ ಕಾಲೇಜು ಆರಂಭವಾಗಿದೆ. ಕುರುಗೋಡು ತಾಲೂಕು ಅರೆ ನೀರಾವರಿ ಪ್ರದೇಶವಾಗಿದ್ದು, ಹಿಂದುಳಿದಿದೆ. ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸುವಂತೆ ಈ ಹಿಂದೆ ಇದ್ದ ಸರ್ಕಾರದ ಜಿಲ್ಲಾ ಸಚಿವರಿಗೆ ಮನವಿ ಸಹ ಕೊಟ್ಟಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ.| ಕೆ.ಎಂ.ಉಮಾಪತಿಗೌಡ, ಸಮಾಜ ಸೇವಕ, ಕುರುಗೋಡು ಮಕ್ಕಳಿಗೆ ಶಿಕ್ಷಣ ದೊರಕಬೇಕು. ಅದು ಅವರ ಹಕ್ಕು. ಕುರುಗೋಡಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲು ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದಷ್ಟೂ ಬೇಗ ಕುರುಗೋಡಿನಲ್ಲಿ ಸುಸಜ್ಜಿತ ಪಾಲಿಟೆಕ್ನಕ್ ಕಾಲೇಜು ಆರಂಭಗೊಳ್ಳಲಿದೆ.| ಜೆ.ಎನ್.ಗಣೇಶ್, ಶಾಸಕ, ಕಂಪ್ಲಿ ವಿಧಾನಸಭಾ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net