

ಕುರುಗೋಡು: ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ನರಸಪ್ಪ ಅಂಗಡಿ ಮಾಲೀಕರಿಗೆ ಎಚ್ಚರಿಸಿದರು.
ಪಟ್ಟಣದ ವಿವಿಧ ರಸಗೊಬ್ಬರ ದಾಸ್ತಾನು ಮಳಿಗೆಗೆ ಕೃಷಿ ಅಧಿಕಾರಿಯೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಸದ್ಯ ತಾಲೂಕಿನಲ್ಲಿ ಉತ್ತಮ ಪ್ರಮಾಣದಲ್ಲಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ನಡೆದಿದೆ.
ಜತೆಗೆ ಆಗಸ್ಟ್ ಮೊದಲ ವಾರದಲ್ಲಿ ಮೆಣಸಿನಕಾಯಿ ಸಸಿ ಕೂಡ ರೈತರು ನಾಟಿ ಮಾಡಲಿದ್ದು, ಅಗತ್ಯ ರಸಗೊಬ್ಬರ ದಾಸ್ತಾನು ಇದೆ. ಆದರೆ, ಕೆಲ ಅಂಗಡಿ ಮಾಲೀಕರು ಅಧಿಕ ಲಾಭ ಪಡೆಯುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿಸುತ್ತಾರೆ. ಅವರ ಮೇಲೆ ನಿಗಾ ವಹಿಸಲಾಗುವುದು ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗರ್ಜಪ್ಪ ಮಾತನಾಡಿ, ಕಳೆದ ಬಾರಿಗಿಂತ ಈ ಸಲ ಮೆಕ್ಕೆಜೋಳ ಬೆಳೆಯುವ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಯೂರಿಯಾ ರಸಗೊಬ್ಬರದಲ್ಲಿ ಸಣ್ಣ ಮತ್ತು ದಪ್ಪ ಹರಳಿನ ಎರಡು ರೀತಿಯ ಗೊಬ್ಬರ ಇದೆ.
ಸಣ್ಣ ಹರಳಿನ ಯೂರಿಯಾದಲ್ಲಿ ಮಾತ್ರ ಹೆಚ್ಚು ಸಾರಜನಕವಿದೆ. ದಪ್ಪ ಹರಳುಗಳಲ್ಲಿ ಕಡಿಮೆ ಇದೆ ಎಂಬ ಗೊಂದಲ ಕೆಲ ರೈತರಲ್ಲಿದೆ. ಆದರೆ, ಎರಡೂ ಹರಳುಗಳುಳ್ಳ ಯೂರಿಯಾದಲ್ಲಿ ಶೇ.46 ಸಾರಜನಕ ಇದ್ದು, ಯಾವುದೇ ವ್ಯತ್ಯಾಸವಿಲ್ಲ ಎಂದರು.