

ಕುರುಗೋಡು: ಬೇಡ ಜಂಗಮರಿಗೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಜಾತಿ ಪ್ರಮಾಣ ಪತ್ರವನ್ನು ಸರ್ಕಾರ ನೀಡಬೇಕು ಎಂದು ಬೇಡ ಜಂಗಮ ರಾಜ್ಯ ಸಂಚಾಲಕ ಹರಿಕೆರೆಮಠದ ಸದಾಶಿವಯ್ಯ ಸ್ವಾಮಿ ಒತ್ತಾಯಿಸಿದರು.
ಪಟ್ಟಣದ ಶ್ರೀ ರಾಘವಾಂಕ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಸಮುದಾಯದವರ ಸಭೆಯಲ್ಲಿ ಮಾತನಾಡಿದರು. ಬೇಡಜಂಗಮರು ಯಾರ ಹಕ್ಕನ್ನೂ ಕಿತ್ತುಕೊಂಡಿಲ್ಲ, ಕಿತ್ತುಕೊಳ್ಳುವುದೂ ಇಲ್ಲ. ಆದರೆ, ಸಂವಿಧಾನಾತ್ಮಕವಾಗಿ ಸಿಗಬೇಕಾಗಿರುವ ಹಕ್ಕನ್ನು ಪಡೆದುಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಡಾ.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವಾಗ ಜಂಗಮರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿದ್ದರು ಎಂದರು.
ಮುಖಂಡ ಎಚ್.ಎಂ.ವಿಶ್ವನಾಥ ಸ್ವಾಮಿ ಮಾತನಾಡಿ, ಸೂರ್ಯನಾಥ ಕಾಮತ್ ವರದಿ ಮತ್ತು ಕೋರ್ಟ್ ಆದೇಶದಲ್ಲೂ ರಾಜ್ಯದ ವೀರಶೈವ ಜಂಗಮರೇ ಬೇಡ ಜಂಗಮರು ಎಂದು ಸ್ಪಷ್ಟವಾಗಿ ತಿಳಿಸಲಾಗದೆ. ಆದರೂ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದರು. ಮುಖಂಡ ಪಂಚಯ್ಯ ಸ್ವಾಮಿ ಮಾತನಾಡಿ, ರಂಭಾಪುರಿ ಶ್ರೀಗಳ ಸಂಕಲ್ಪದ ಮೇರೆಗೆ ತಾಲೂಕಿನ ಎಲ್ಲ ಗ್ರಾಮದ ಬೇಡ ಜಂಗಮರು ಒಂದಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಈ ಮೊದಲು ಪಟ್ಟಣಕ್ಕೆ ಆಗಮಿಸಿದ ಬೇಡ ಜಂಗಮ ಜ್ಯೋತಿ ರಥವನ್ನು ಮುಖ್ಯ ವೃತ್ತದಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರಮುಖರಾದ ನಾಗಯ್ಯ ಸ್ಯಾಮಿ, ಸಿ.ಎಂ ಸುರೇಶ್ ಕುಮಾರ್, ಕಂಚಿ ವೀರೇಶ್, ರಾಜಶೇಖರಯ್ಯ ಸ್ವಾಮಿ, ಹೆಚ್.ಎಂ.ವಿಶ್ವಾರಾಧ್ಯ, ಉದಯ ಕುಮಾರ್ ಇತರರಿದ್ದರು.