ಸಮರ್ಪಕ ಬಸ್‌ಗಳ ವ್ಯವಸ್ಥೆ ಕಲ್ಪಿಸಲು ಸೋಮಸಮುದ್ರದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

020922 Somasamudra Student Protest
ಸೋಮಸಮುದ್ರ ರಸ್ತೆಯಲ್ಲಿ ವಿದ್ಯಾರ್ಥಿಗಳು ಬಸ್‌ಗಳನ್ನು ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
Published on

ಕುರುಗೋಡು: ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಸೋಮಸಮುದ್ರದಲ್ಲಿ ಬಸ್‌ಗಳನ್ನು ತಡೆದು ಕಾಲೇಜು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಬಳ್ಳಾರಿ ಕಾಲೇಜುಗಳಿಗೆ ತೆರಳಲು ಸೋಮಸಮುದ್ರ, ಏರಂಗಳ್ಳಿ, ಶ್ರೀನಿವಾಸ್ ಕ್ಯಾಂಪ್ ಸೇರಿದಂತೆ ಸುಮಾರು 250 ವಿದ್ಯಾರ್ಥಿಗಳು ಸರ್ಕಾರಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಆದರೆ, ಈ ಮಾರ್ಗದಲ್ಲಿ ಸರಿಯಾದ ಸಮಯಕ್ಕೆ ಸಂಚರಿಸುತ್ತಿಲ್ಲ. ಇದರಿಂದ ಕಾಲೇಜಿಗೆ ತೆರಳಲಾಗುತ್ತಿಲ್ಲ ಮತ್ತು ತರಗತಿಗಳಿಂದ ವಂಚಿತರಾಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಬೆಳಗ್ಗೆ ಎಂಟಕ್ಕೆ ಬರಬೇಕಾದ ಬಸ್ 8.40ಕ್ಕೆ ಬರುತ್ತದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ ಸಂಖ್ಯೆಯಿಲ್ಲ. ಬೆಳಗ್ಗೆ ಎಂಟು ಗಂಟೆಗೆ ಎರಡು ಬಸ್‌ಗಳನ್ನು ಓಡಿಸಿದರೆ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲ ಎಂದು ಹೇಳಿದರು.

ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವ ಮಾರ್ಗದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಏತ ನೀರಾವರಿ ಯೋಜನೆ ಉದ್ಘಾಟನೆ ಮಾಡಲು ಬರುವ ಸುದ್ದಿ ಕೇಳಿ ಡಿಪೋ ಅಧಿಕಾರಿಗಳು ಹಾಗೂ ಪೊಲೀಸರು ವಿದ್ಯಾರ್ಥಿಗಳ ಮನವೊಲಿಕೆ ಯತ್ನ ಮಾಡಿದರು. ಪ್ರತಿಭಟನೆ ಕೈಬಿಡಿ, ಇನ್ಮುಂದೆ ಸಕಾಲಕ್ಕೆ ಬಸ್ ವ್ಯವಸ್ಥೆ ಕಲ್ಪಿಸುತ್ತೇವೆ ಎಂದರು. ಆದರೆ, ಪಟ್ಟುಬಿಡದ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದರು. ನಂತರ ಹೆಚ್ಚುವರಿ ಬಸ್ ಕರೆ ತಂದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿದ್ಯಾರ್ಥಿಗಳಾದ ಕೆ.ಕೆಂಚ, ಚಂದ್ರ, ಮಾರುತಿ, ಅಜಯ, ಮಣಿಕಂಠ, ಶಾಸ್ತ್ರೀ, ಮನೋಜ, ಮನಮೋಹನ್, ದೇವರಾಜ್, ಉದಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net