

ಕುರುಗೋಡು: ಮುಂಗಾರು ಮಳೆ ಕೊರತೆಯಿಂದ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗದಿರುವುದು ಪಟ್ಟಣದ ಜನರ ಕುಡಿವ ನೀರಿನ ಸಮಸ್ಯೆಗೆ ಕಾರಣವಾಗಿದೆ.
ಪಟ್ಟಣಕ್ಕೆ ಪ್ರತಿದಿನ 6 ಲಕ್ಷ ಲೀಟರ್‌ನಂತೆ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿ 17 ಎಕರೆ ಪ್ರದೇಶದಲ್ಲಿ 2010ರಲ್ಲಿ ಕೆರೆ ನಿರ್ಮಿಸಿದ್ದು, ತುಂಗಭದ್ರಾ ಜಲಾಶಯದ ಕೆಳ ಮಟ್ಟದ ಕಾಲುವೆಯಿಂದ ನೀರು ಹರಿಸಲಾಗುತ್ತಿತ್ತು. ಪ್ರಸಕ್ತ ವರ್ಷ ಮುಂಗಾರು ವಿಳಂಬದಿಂದ ಕಾಲುವೆಗೆ ನೀರು ಹರಿಯದೆ ಕೆರೆ ಬರಿದಾಗುತ್ತಿದ್ದು, ಕೇವಲ ನಾಲ್ಕು ಅಡಿ ಬಾಕಿ ಇದೆ.
ಸದ್ಯ ಎರಡ್ಮೂರು ದಿನಕ್ಕೊಮ್ಮೆ ಕುಡಿವ ನೀರು ಪೂರೈಸಲಾಗುತ್ತಿದೆ. ಪುರಸಭೆ ವ್ಯಾಪ್ತಿಗೆ ಒಳಪಡುವ ಬೋರ್‌ವೆಲ್‌ನಿಂದಲೂ ಪಟ್ಟಣದ ಜನರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಬೋರ್‌ವೆಲ್ ನೀರು ಶುದ್ಧೀಕರಿಸದೆ ನೇರವಾಗಿ ಬಿಡಲಾಗುತ್ತಿದೆ. ಕೊಳವೆ ನೀರಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಶುದ್ಧೀಕರಿಸಿ ಪೂರೈಸಲು ಅಧಿಕಾರಿಗಳು ಮುಂದಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಕೆರೆಯಲ್ಲಿ ಸದ್ಯ ನಾಲ್ಕು ಅಡಿ ನೀರಿದ್ದು, ತಳ ಮಟ್ಟದಲ್ಲಿ ಪಾಚಿ, ಹೂಳು ಹೆಚ್ಚಾಗಿದೆ. ಅಲ್ಲದೆ ಜಲಚರಗಳಿಗೆ ಡೆಡ್ ಸ್ಟೋರೆಜ್ ಎಂದು ಕನಿಷ್ಠ 2 ಅಡಿ ಬಿಡಬೇಕಿದೆ. ಅಂದರೆ 4 ಅಡಿ ನೀರಲ್ಲಿ 2 ಅಡಿ ಮಾತ್ರ ಬಳಕೆಗೆ ಯೋಗ್ಯವಿದೆ. ಕೆರೆ ಬರಿದಾಗುವ ಮುಂಚೆ ಕಾಲುವೆಗೆ ನೀರು ಬಂದರೆ ಪಟ್ಟಣದ ಜನರಿಗೆ ನೀರಿನ ಸಮಸ್ಯೆ ನೀಗುತ್ತದೆ. ಇಲ್ಲವಾದರೆ ಪರದಾಡುವಂತಾಗಲಿದೆ. ಉಳ್ಳವರು ಖಾಸಗಿ ಆರ್‌ಒ ಘಟಕಗಳಲ್ಲಿ ನೀರು ಕೊಂಡು ಕುಡಿದರೆ, ಬಡವರು, ದಿನಗೂಲಿ ನೌಕರರು ಹಾಗೂ ಕಾರ್ಮಿಕರಿಗೆ ಫ್ಲೋರೈಡ್ ನೀರೇ ಗತಿಯಾಗಿದೆ.
ಕೆರೆಯಲ್ಲಿ ನೀರಿನ ಪ್ರಮಾಣ ತಗ್ಗಿದೆ. ಹೀಗಾಗಿ ಬೋರ್‌ವೆಲ್‌ಗಳಿಂದ ಜನರಿಗೆ ನೀರು ಪೂರೈಕೆ ಮಾಡುತ್ತಿದ್ದೇವೆ. ಡ್ಯಾಮ್ ನೀರು ಬರುವರೆಗೂ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗಿದೆ. ಜನರು ಸಹ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ಮುಂದಿನ ದಿನಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ಮತ್ತೊಂದು ಕೆರೆ ನಿರ್ಮಾಣ ಮಾಡುವ ಯೋಜನೆ ಇದೆ.ಎಂ.ವಿಜಯಲಕ್ಷ್ಮೀ, ಮುಖ್ಯಾಧಿಕಾರಿ, ಪುರಸಭೆ, ಕುರುಗೋಡು ಟಿ.ಬಿ. ಡ್ಯಾಮ್‌ಗೆ ನೀರು ಬರಲು ಆರಂಭವಾಗಿದೆ. ದಿನಕ್ಕೆ 17 ಸಾವಿರ ಕ್ಯೂಸೆಕ್ ನೀರು ಬಂದರೆ, ಡ್ಯಾಂ ಪೂರ್ತಿ ತುಂಬಲು ತಿಂಗಳು ಬೇಕಾಗುತ್ತದೆ. ಸದ್ಯ ಕುರುಗೋಡಿನ ಜನರಿಗೆ ನೀರಿನ ಸಮಸ್ಯೆ ಆಗದಿರಲು ಪುರಸಭೆ ಆಡಳಿತ ಇನ್ನಷ್ಟು ಬೋರ್‌ವೆಲ್ ಕೊರೆಸಬೇಕು.ಪುರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಇದರಿಂದ ವಾರ್ಡ್ ಜನರು ಸದಸ್ಯರ ಬಳಿ ಸಮಸ್ಯೆ ಹೇಳಿಕೊಂಡರೂ ಉಪಯೋಗವಿಲ್ಲ. ಯಜಮಾನ ಇಲ್ಲದ ಮನೆಯಾಗಿದೆ ಪುರಸಭೆ. ಅಧಿಕಾರಿಗಳೇ ನೀರಿನ ಸಮಸ್ಯೆ ಆಗದಂತೆ ಯೋಜನೆ ರೂಪಿಸಬೇಕು.ಎನ್.ಕೊಮಾರೆಪ್ಪ,ಭೂನ್ಯಾಯ ಮಂಡಳಿ ಸದಸ್ಯ, ಕುರುಗೋಡು ಮೊದಲಿಂದಲೂ ಕುರುಗೋಡಿನಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಕೆರೆ ಖಾಲಿಯಾದರೆ ಮತ್ತಷ್ಟು ಸಮಸ್ಯೆ ಉದ್ಭವಿಸುತ್ತದೆ.ಬೋರ್‌ವೆಲ್‌ನಿಂದ ನೀರು ಸರಬರಾಜು ಮಾಡುತ್ತಿದ್ದು, ಪೈಪ್ ಒಡೆಯುವುದು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನೀರು ಸರಿಯಾಗಿ ಬರುತ್ತಿಲ್ಲ. ಅಧಿಕಾರಿಗಳು ಪ್ರತಿ ವಾರ್ಡ್‌ನಲ್ಲಿ ಬೋರ್‌ವೆಲ್ ಕೊರೆಸಿದರೆ ತಕ್ಕ ಮಟ್ಟಿಗೆ ನೀರಿನ ಸಮಸ್ಯೆ ತಗ್ಗಿಸಬಹುದು.ನಾಗಭೂಷಣ, ಪುರಸಭೆ 14ನೇ ವಾರ್ಡ್ ಸದಸ್ಯ, ಕುರುಗೋಡು