

ಕುರುಗೋಡು: ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪಟ್ಟಣದ ಸಿಂದಿಗೇರಿ ರಸ್ತೆಯಲ್ಲಿರುವ ಸರ್ಕಾರಿ ಭೂಮಿಯಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರಿ ಜಾಗವೆಂದು ನಾಮಫಲಕ ಅಳವಡಿಸಲು ಆಗಮಿಸಿದ್ದ ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸಿಂದಿಗೇರಿ ರಸ್ತೆಯಲ್ಲಿರುವ ಸರ್ಕಾರಿ ಭೂಮಿಯಲ್ಲಿ ತಾತ ಮುತ್ತಾತರ ಕಾಲದಿಂದಲೂ ಉಳುಮೆ ಮಾಡುತ್ತಿರುವ ರೈತರು ಹಕ್ಕು ಪತ್ರಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇಂದಿಗೂ ಇದೇ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
150 ದಿನ ಹೋರಾಟ ಕೈಗೊಂಡಾಗ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆಯಲಾಗಿತ್ತು. ಇದೀಗ ಏಕಾಏಕಿ ಅನಧಿಕೃತವಾಗಿ ಸಾಗುವಳಿ ಹಾಗೂ ಅತಿಕ್ರಮಣ ನಿಷೇಧಿಸಲಾಗಿದೆ ಎಂದು ಬೋರ್ಡ್ ಹಾಕಲು ಮುಂದಾಗಿರುವುದನ್ನು ಖಂಡನೀಯ.
ನಾಮಫಲಕ ಹಾಕಲು ಬಿಡುವುದಿಲ್ಲ. ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ರೈತ ಮುಖಂಡರಾದ ರಾಮಪ್ಪ ಕರಿ ಕೆಂಚಪ್ಪ, ಹುಲುಗಪ್ಪ, ಬಸಪ್ಪ, ತಿಪ್ಪಯ್ಯ, ಮಖ ಬಸಪ್ಪ, ನಾಗಪ್ಪ, ಪರಶುರಾಮ,ಟಿ ರುದ್ರಪ್ಪ,ವಿ ಬಸವರಾಜ, ಶ್ರೀನಿವಾಸ,ನಿಲಪ್ಪ, ನಿಂಗಪ್ಪ,ವಿ ಕೆಂಚಪ್ಪ,ಬೈಲೂರು ಬಸವರಾಜ ಇತರರಿದ್ದರು.