

ಕುರುಗೋಡು: ಬರದಿಂದ ಬೆಳೆನಷ್ಟವಾಗಿ ಸಾಲ ತೀರಿಸಲಾಗದೆ ದಮ್ಮೂರು ಗ್ರಾಮದಲ್ಲಿ ಗುರುವಾರ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಮ್ಮೂರು ಗ್ರಾಮದ ಮಹಾಂತೇಶ್ (35) ಮೃತ.
ರೈತ ಮಹಾಂತೇಶ್ ತಾಯಿ ಹೆಸರಿನಲ್ಲಿರುವ 3 ಎಕರೆ ಹಾಗೂ ತಮ್ಮನ 1.50 ಎಕರೆ ಮತ್ತು ಹೆಂಡತಿಯ 1 ಎಕರೆ ಭೂಮಿಯಲ್ಲಿ ಮೆಣಿಸಿನಕಾಯಿ ಬಿತ್ತನೆ ಮಾಡಿದ್ದರು. ಮಳೆ ಇಲ್ಲದೆ ಹಾಗೂ ನೀರು ಸಿಗದ ಪರಿಣಾಮ ಬೆಳೆ ನಷ್ಟಗೊಂಡಿದೆ. ಕೃಷಿಗಾಗಿ ಗ್ರಾಮದ ಪ್ರಾಕೃಪಸ ಸಂಘದಲ್ಲಿ 2.20 ಲಕ್ಷ ರೂ. ಹಾಗೂ ಕೈಗಡ 10 ಲಕ್ಷ ರೂ. ಮಾಡಿದ್ದರು ಎನ್ನಲಾಗಿದೆ. ಕಾರ್ತಿಕ ಮಾಸ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಕುಟುಂಬಸ್ಥರು ಗೌರಮ್ಮಗೆ ಆರತಿ ಬೆಳಗಿಕೊಂಡು ಬರಲು ದೇವಸ್ಥಾನಕ್ಕೆ ಹೋದಾಗ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.
ಇವರಿಗೆ ತಾಯಿ, ಪತ್ನಿ, ಮೂವರು ಪುತ್ರಿಯರು, ಪುತ್ರ ಇದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಹಾಗೂ ಶಾಸಕ ಗಣೇಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ದೊರೆಯುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಕುರುಗೋಡು ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.