

ಕುರುಗೋಡು: ಹಣ, ಆಸ್ತಿ, ಸಂಸಾರದ ವ್ಯಾಮೋಹದಿಂದ ದೂರವಾಗಿಸಿ, ನರನನ್ನು ಹರನಾಗಿಸುವ ಶಕ್ತಿ ಗುರುವಿನಿಂದ ಮಾತ್ರ ಸಾಧ್ಯ ಎಂದು ಬಸಯ್ಯ ತಾತನ ಮಠದ ಕರಿಬಸವ ಶಿವಶರಣರು ತಿಳಿಸಿದರು.
ಬಾದನಹಟ್ಟಿ ಗ್ರಾಮದ ಬಸಯ್ಯತಾತನ ಮಠದಲ್ಲಿ ಭಕ್ತರಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ತುಲಾಭಾರ ಸೇವೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕೆಳಗೆ ಬಿದ್ದವರ ಮೇಲೆತ್ತುವ ಏಕೈಕ ವ್ಯಕ್ತಿ ಎಂದರೆ ಅದು ಗುರು. ಗುರುವಿನ ಪಾದದಲ್ಲಿ ಪ್ರಾಪಂಚಿಕ, ಪಾರಮಾರ್ಥಿಕ ಸುಖ, ಭೋಗ ಇದೆ. ಶಿವನು ಭೂಮಂಡಲದಲ್ಲಿ ಗುರುವಾಗಿ, ಲಿಂಗವಾಗಿ, ಜಂಗಮನಾಗಿ ಸದಾ ಭಕ್ತರ ಮಧ್ಯ ಇರುತ್ತಾನೆ.
ಶಿಷ್ಯರಿಂದ ಗುರು ನಿಷ್ಕಲ್ಮಶ ಭಕ್ತಿ ಹೊರತುಪಡಿಸಿ ಮತ್ತೇನೂ ಬಯಸುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಗುರುವನ್ನು ಗೌರವಿಸಿ, ಆತ ತೋರಿಸಿದ ಮಾರ್ಗದಲ್ಲಿ ಸಾಗಿದರೆ ಬದುಕಿಗೆ ಸಾರ್ಥಕತೆ ದೊರೆಯಲಿದೆ ಎಂದರು.