

ಕುರುಗೋಡು: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಐದು ಮನೆಗಳಿಗೆ ಹಾನಿಯಾಗಿದೆ.
ಮದಿರೆ, ದಮ್ಮೂರು, ಸಿಂಧಿಗೇರಿ, ಬೈಲೂರು ಮತ್ತು ತಿಮ್ಮಲಾಪುರ ಗ್ರಾಮದಲ್ಲಿ ತಲಾ ಒಂದು ಮನೆ ಮಳೆಯಿಂದಾಗಿ ಜಖಂಗೊಂಡಿವೆ. ತಹಸೀಲ್ದಾರ್ ನರಸಪ್ಪ ಮತ್ತು ಕಂದಾಯ ನಿರೀಕ್ಷಕ ಭದ್ರಯ್ಯ, ಮದಿರೆ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಯಾಗಿರುವ ಮನೆಯನ್ನು ಪರಿಶೀಲಿಸಿದರು.
ಮಳೆ ಮುಂದುವರಿಯುವ ವಾತಾವರಣವಿದ್ದು, ಬೀಳುವ ಹಂತದಲ್ಲಿರುವ ಮಳೆಗಳಲ್ಲಿ ವಾಸವಿರುವ ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಹಸೀಲ್ದಾರ್ ನರಸಪ್ಪ ಕೋರಿದ್ದಾರೆ. ಉತ್ತಮ ಮಳೆಯಿಂದಾಗಿ ಕೃಷಿಹೊಂಡಗಳು ಭರ್ತಿಯಾಗಿವೆ. ಇದರಿಂದಾಗಿ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಲಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.