ವೇತನ ಕೈಗೆಟುಕದೆ ನರೇಗಾ ನೌಕರರ ಪರದಾಟ

kgd-3
ಕುರುಗೋಡು ತಾಪಂ
Published on

ಕುರುಗೋಡು: ನರೇಗಾ ಯೋಜನೆಯ ಹೊರಗುತ್ತಿಗೆ ನೌಕರರಿಗೆ ಖಜಾನೆ ಮೂಲಕ ವೇತನ ಪಾವತಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಖಜಾನೆ ಮತ್ತು ನರೇಗಾ ವೆಬ್‌ಸೈಟ್‌ಗಳೆರಡನ್ನೂ ಸಂಯೋಜಿಸಿ ಎಸ್‌ಎನ್‌ಎ ಸ್ಪರ್ಶ್ ಮೂಲಕ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.

ಆದರೆ, ಎರಡು ವೆಬ್‌ಸೈಟ್‌ಗಳಲ್ಲಿ ಹೊಂದಾಣಿಕೆಯಾಗದೆ ಕಳೆದ ಆರು ತಿಂಗಳಿಂದ ವೇತನ ಬಾರದೆ ನೌಕರರು ಪರದಾಡುವಂತಾಗಿದೆ.

ನರೇಗಾದಡಿ ರಾಜ್ಯದ ಜಿಪಂ, ತಾಪಂ ಮತ್ತು ಗ್ರಾಪಂನಲ್ಲಿ ತಾಂತ್ರಿಕ, ಎಂಐಎಸ್ ಹಾಗೂ ಐಇಸಿ ಸಂಯೋಜಕ, ಆಡಳಿತ ಸಹಾಯಕ, ಟಿಎಇ ಸಂಯೋಜಕ,

ಟಿಎಇ ತಾಂತ್ರಿಕ ಸಹಾಯಕ, ಬಿಎಫ್‌ಟಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 3,632, ಬಳ್ಳಾರಿ ಜಿಲ್ಲೆಯಲ್ಲಿ 167, ತಾಪಂ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 24 ಜನರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರ ಈಗಾಗಲೇ ಬಾಕಿ ವೇತನವನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಆದರೆ, ಎಸ್‌ಎನ್‌ಎ ಸ್ಪರ್ಶ್ ವೆಬ್‌ಸೈಟ್ ತಾಂತ್ರಿಕ ದೋಷದಿಂದ ಜನವರಿಯಿಂದ ಈವರೆಗೂ ವೇತನ ಪಾವತಿಯಾಗಿಲ್ಲ. ಇದರಿಂದ ಕುಟುಂಬದ ನಿರ್ವಹಣೆಗೆ ನೌಕರರು ಪರದಾಡುವಂತಾಗಿದೆ.

====

ನರೇಗಾ ಯೋಜನೆಯಡಿ ಕೆಲಸ ಮಾಡುವ ಸಿಬ್ಬಂದಿಗೆ ಕಡಿಮೆ ಸಂಬಳ ಇದೆ. ಕಳೆದ ಆರೇಳು ತಿಂಗಳಿಂದ ವೇತನ ಬಾಕಿ ಉಳಿದಿದ್ದು, ಈ ಬಗ್ಗೆ ಜಿಪಂ ಸಿಇಒ ಗಮನಕ್ಕೂ ತರಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವರ ಗಮನಕ್ಕೆ ತಂದು ಪರಿಹರಿಸುವ ಭರವಸೆ ನೀಡಿದ್ದಾರೆ.

> ಪಿ.ಶಿವಾನಂದ ರೆಡ್ಡಿ, ನರೇಗಾ ಸಹಾಯಕ ನಿರ್ದೇಶಕ, ಕುರುಗೋಡು

ಸಂಬಳ ಇಲ್ಲದೆ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿದೆ. ದೈನಂದಿನ ಓಡಾಟಕ್ಕೂ ಸಾಲ ಮಾಡುವ ಪರಿಸ್ಥಿತಿ ಇದೆ. ಈ ಬಗ್ಗೆ ಇಲಾಖೆಯ ಎಲ್ಲ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

> ಸಿ.ಚಂದ್ರು, ನರೇಗಾ ನೌಕರ, ಕುರುಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net