

ಕುರುಗೋಡು : ಶೀಘ್ರದಲ್ಲೇ ಬಿ.ನಾಗೇಂದ್ರಗೆ ಮಂತ್ರಿಗಿರಿ ದೊರಕಲಿದ್ದು, ಕಂಪ್ಲಿ ಶಾಸಕ ಜೆ.ಎನ್.ಗಣೇಶ್‌ಗೂ ಸಚಿವರಾಗಿವ ಅರ್ಹತೆ ಇದೆ. ಸಿಎಂ ಸಿದ್ದರಾಮಯ್ಯ ನಮ್ಮ ದೊರೆ. ನಮ್ಮ ಸರ್ಕಾರವನ್ನು ಯಾರಿಂದಲೂ ಅತಂತ್ರಗೊಳಿಸಲು ಸಾಧ್ಯವಿಲ್ಲ. ಮುಂದಿನ ಮೂರು ವರ್ಷವಷ್ಟೇ ಅಲ್ಲ, ಹತ್ತು ವರ್ಷಗಳ ಕಾಲವೂ ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ಕಲ್ಲುಕಂಬದಲ್ಲಿ ಕುರುಬ ಸಮುದಾಯದಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಮ್ಮ ಪಾತ್ರ ಇಲ್ಲದಿದ್ದರೂ ಬಿಜೆಪಿ ಅಪಪ್ರಚಾರ ಮಾಡಿದೆ. ಆದರೆ, ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದರು.
ವಿಪ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಎಂಬ ಕಾರಣಕ್ಕೆ ಬಿಜೆಪಿ ಸೇರಿದಂತೆ ಕೆಲ ವರ್ಗದವರು ಕುತಂತ್ರ ರೂಪಿಸುತ್ತಿದ್ದಾರೆ. ಸಿಎಂಗೆ ಜನರ ಬೆಂಬಲ ಇರುವವರೆಗೂ ಅದು ಸಫಲವಾಗದು ಎಂದರು. ಕಾಗಿನೆಲೆ ಸಂಸ್ಥಾನ ತಿಂಥಿಣಿ ಬ್ರಿಡ್ಜ್ ಶಾಖಾಮಠದ ಸಿದ್ದರಾಮಾನಂದ ಸ್ವಾಮೀಜಿ, ಗೋವರ್ಧನ ಸ್ವಾಮೀಜಿ, ಶಾಸಕರಾದ ಬಿ.ನಾಗೇಂದ್ರ, ಜೆ.ಎನ್ ಗಣೇಶ್, ನಾರಾಭರತ್ ರೆಡ್ಡಿ, ಡಿ.ರವಿಶಂಕರ್, ರಾಘವೇಂದ್ರ ಹಿಟ್ನಾಳ್, ಪ್ರಮುಖರಾದ ನಿಕಿತ್ ಮೌರ್ಯ, ಕುರುಗೋಡು ಮಲ್ಲಿಕಾರ್ಜುನ, ವಿರುಪಾಪುರ ಬಸವರಾಜ, ಕೆಎಎಸ್ ಸ್ವಾಮಿ, ರಾಮಲಿಂಗಪ್ಪ, ಮುಲ್ಲಂಗಿ ನಂದೀಶ್, ವೀರನಗೌಡ, ಶಶಿಕಲಾ ಇತರರು ಇದ್ದರು.
ಜೆಡಿಎಸ್-ಬಿಜೆಪಿಗೆ ಜಾತಿ ಗಣತಿ ಮಾಡುವ ಯೋಗ್ಯತೆಯಿಲ್ಲ. ಆದರೆ, ಈಗಾಗಲೇ ಆಗಿರುವ ಜಾತಿ ಗಣತಿಯ ವರದಿಯನ್ನು ಒಪ್ಪಿಕೊಳ್ಳೋದಕ್ಕೆ ಬಿಜೆಪಿ ನಾಯಕರಿಗೆ ಏನು ತೊಂದರೆ ಎಂದು ತಿಳಿಯುತ್ತಿಲ್ಲ. ಜಾತಿ ಗಣತಿ ವರದಿ ಬಿಡುಗಡೆ ಮಾಡಿದರೆ ಸಿಎಂ ಕುರ್ಚಿ ಉಳಿಯಲ್ಲವೆಂಬ ಬಿಜೆಪಿ ನಾಯಕರ ಮಾತುಗಳಿಗೆ ನಾನು ಉತ್ತರಿಸುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ವರದಿ ಮಾಡಿಯಾಗಿದೆ. ಜಾತಿಗಣತಿ ವರದಿ ಬಗ್ಗೆ ಚರ್ಚಿಸಲು ಏ.17ರಂದು ಸಚಿವ ಸಂಪುಟದ ವಿಶೇಷ ಸಭೆ ಕರೆಯಲಾಗಿದೆ. ವರದಿ ನನ್ನ ಕೈ ಸೇರಿದ್ದು, ಅಧ್ಯಯನ ಬಳಿಕ ಸಂಪುಟ ಸಭೆ ಮುಂದೆ ಅಭಿಪ್ರಾಯ ಮಂಡಿಸುವೆ. | ಬೈರತಿ ಸುರೇಶ್ ನಗರಾಭಿವೃದ್ಧಿ ಸಚಿವ