

ಕುರುಗೋಡು: ತಾಲೂಕಿನ ವಿವಿಧ ಶಾಲೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಕೆಲ ತಿಂಗಳಿಂದ ಮಕ್ಕಳಿಲ್ಲದೆ ಬಿಕೋ ಎನ್ನುತ್ತಿದ್ದ ಶಾಲಾ ಆವರಣ ಚಿಣ್ಣರ ಆಟದಿಂದ ಜೀವಕಳೆ ಪಡೆದಿತ್ತು. ಕುರುಗೋಡು, ಯಲ್ಲಾಪುರ, ದಮ್ಮೂರು, ಬಸಾಪುರ, ಗೆಣಿಕೆಹಾಳು, ಕಲ್ಲುಕಂಬ, ಬಾದನಹಟ್ಟಿ, ಚಾನಾಳ್, ಹಡ್ಲಿಗಿ ಸೇರಿದಂತೆ ವಿವಿಧ ಸರ್ಕಾರಿ ಜ್ಞಾನ ದೇಗುಲಗಳನ್ನು ಬೆಳಗ್ಗೆಯಿಂದಲೇ ರಂಗೋಲಿ, ತಳಿರು ತೋರಣ ಹಾಗೂ ವಿವಿಧ ಬಗೆಯ ಅಲಂಕಾರದಿಂದ ಸಿಂಗರಿಸಲಾಗಿತ್ತು. ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಗೆ ಪ್ರವೇಶ ಪಡೆಯಲು ಬಂದಿದ್ದ ಮಕ್ಕಳು, ಪಾಲಕರಿಗೆ ಶಿಕ್ಷಕರು ಹೂ ನೀಡಿ ವಿದ್ಯಾರ್ಥಿಗಳು ಬರ ಮಾಡಿಕೊಂಡರು. ಬಳಿಕ ಮಕ್ಕಳು ಸಿಹಿ ಖಾದ್ಯ ಸವಿದು ಖುಷಿಪಟ್ಟರು.
ಸರ್ಕಾರಿ ಶಾಲೆಯಲ್ಲಿ ಶಿಕ್ಷಣ, ಬಿಸಿಯೂಟ, ಶೂ, ಪಠ್ಯಪುಸ್ತಕ, ಸಮವಸ್ತ್ರ ಉಚಿತವಾಗಿ ನೀಡಲಾಗುತ್ತದೆ. ಉತ್ತಮ ಕಟ್ಟಡ, ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದ್ದು, ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಬಹುದು ಎಂದು ಶಿಕ್ಷಕ ರಾಜಶೇಖರ್‌ಹೇಳಿದರು.