

ಮಂಡ್ಯ: ಪ್ರತಿ ಟನ್ ಕಬ್ಬಿಗೆ 3500 ರೂ ಎಫ್‌ಆರ್‌ಪಿ ದರ ನಿಗದಿ ಮಾಡಬೇಕೆಂದು ಒತ್ತಾಯಿಸಿ ಆ.12ರಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಕಬ್ಬಿಗೆ ಬಳಸುವ ರಸಗೊಬ್ಬರ ಸೇರಿದಂತೆ ಕಟಾವು ಕೂಲಿ ದುಪ್ಪಟ್ಟು ಏರಿಕೆಯಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಕೇವಲ 150 ರೂ ಏರಿಕೆ ಮಾಡಿ ಟನ್‌ಗೆ 3,050 ರೂ ನಿಗದಿ ಮಾಡಿದೆ. ಉತ್ತರ ಪ್ರದೇಶ ಸರ್ಕಾರ ಟನ್‌ಗೆ 3,500 ರೂ ನಿಗದಿ ಮಾಡಿದೆ. ಕೇಂದ್ರ ಸರ್ಕಾರ ಏಕೆ ಕಡಿಮೆ ಮಾಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನು 10 ರಿಂದ 10.25ಕ್ಕೆ ಏರಿಕೆ ಮಾಡಿ ಕಬ್ಬು ಬೆಳೆ ರೈತರಿಗೆ ಮತ್ತೊಂದು ರೀತಿ ದ್ರೋಹ ಬಗೆದಿದೆ. ಇದರಿಂದ ನಿಗದಿಯಾಗಿರುವ ಹಣದಲ್ಲಿ ಟನ್‌ಗೆ 75 ರೂ ಕಡಿತವಾಗುತ್ತದೆ. ಕೇಂದ್ರ ಸರ್ಕಾರ ಸಕ್ಕರೆ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಕಳೆದೊಂದು ತಿಂಗಳಿಂದ ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ರೈತರ ಸಂಕಷ್ಟವನ್ನು ಅರಿಯುತ್ತಿಲ್ಲ, ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಎಚ್ಚರಿಸಲು 12ರಂದು ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಸಲಾಗುತ್ತಿದೆ ಎಂದರು.
ಸಂಘದ ರಾಜ್ಯ ಖಜಾಂಚಿ ಎಂ.ಬಿ.ಚೇತನ್, ಅತ್ತಳ್ಳಿ ದೇವರಾಜ್, ಕೆಆರ್‌ಎಸ್ ರಾಮೇಗೌಡ, ಯೋಗೇಶ್, ಮುರುಳೀಧರ್, ಮಹೇಶ್ ಹಾಜರಿದ್ದರು.