ಕುರುಬರು ಒಗ್ಗಟ್ಟಾದರೆ ಮೀಸಲು ಸಿಕ್ಕಿತಲೇ ಪರಾಕ್!

Kurubas Rally
Published on

ಬ್ಯಾಡಗಿ(ಹಾವೇರಿ): ಕರ್ನಾಟಕದ ಕುರುಬರು ಒಗ್ಗಟ್ಟಾಗಿ ಹೆಜ್ಜೆ ಹಾಕಿದರೆ ಎಸ್​ಟಿ ಸಿಕ್ಕಿತಲೇ ಪರಾಕ್...! ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕಾಗಿನೆಲೆ ಕನಕ ಗುರುಪೀಠದಿಂದ ಬೆಂಗಳೂರವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು ಶುಕ್ರವಾರ ಚಾಲನೆ ನೀಡಿ, ಕಾರಣಿಕ ಮಾದರಿಯಲ್ಲಿ ನುಡಿದು ಶಂಖ ಮೊಳಗಿಸಿದರು.

ಮೈಲಾರಲಿಂಗಪ್ಪನ ಕಾರಣಿಕದ ನುಡಿಯಂತೆ ನಮ್ಮ ಈ ಮಾತು ಸತ್ಯವಾಗಬೇಕಾದರೆ ನಿಮ್ಮೆಲ್ಲರ ಪ್ರಯತ್ನ ಬಹುಮುಖ್ಯವಾಗಿದೆ. ಇದು ನಾವು ಹೇಳುವ ಕಾರಣಿಕವಲ್ಲ. ಮೈಲಾರಲಿಂಗಪ್ಪ ಮೈಮೇಲೆ ಬರುವ ಗೊರವಪ್ಪನನ್ನು ಸಾಕ್ಷಿಯಾಗಿಟ್ಟುಕೊಂಡು ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠ ಹೇಳುವ ಕಾರಣಿಕ. ನನ್ನ ಮೈಮೇಲೆ ಮೈಲಾರಲಿಂಗಪ್ಪ ಬಂದಿಲ್ಲ. ಆದರೂ ಕನಕದಾಸರ ಕರ್ಮಭೂಮಿಯಲ್ಲಿ ನನ್ನ ಬಾಯಿಂದ ಈ ಮಾತು ಬಂದಿದ್ದು, ನೀವೆಲ್ಲ ಒಗ್ಗಟ್ಟಾಗುತ್ತೀರಿ. ಫೆ. 7ರಂದು ಬೆಂಗಳೂರಲ್ಲಿ 10ಲಕ್ಷ ಜನ ಸೇರಲಿದ್ದು, ಕೇಂದ್ರ ಸರ್ಕಾರ ನಮ್ಮತ್ತ ತಿರುಗಿ ನೋಡಲಿದೆ ಎಂದು ಭವಿಷ್ಯ ನುಡಿದ ಶ್ರೀಗಳು, ಮೀಸಲಾತಿ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಣೆ ಮಾಡಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಕುರುಬರಿಗೆ ಎಸ್​ಟಿ ಮೀಸಲಾತಿ ಸಿಗಲೇಬೇಕು ಎಂದು ಹೋರಾಟ ಆರಂಭಗೊಂಡ ನಂತರ ರಾಜ್ಯದಲ್ಲಿ ನಿರೀಕ್ಷೆಗೆ ಮೀರಿ ಜನಸ್ಪಂದನೆ ಸಿಕ್ಕಿದೆ. ಈಗಾಗಲೇ ಅನೇಕ ಸಮಾವೇಶ ಮಾಡಿದ್ದೇವೆ. ಸ್ವಾಮೀಜಿಗಳ ನೇತೃತ್ವದಲ್ಲಿ 340ಕಿಮೀ ಪಾದಯಾತ್ರೆ ಆರಂಭಿಸಲಾಗಿದೆ. ಫೆ. 7ರಂದು ಬೆಂಗಳೂರಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು. ಕುರುಬರಿಗೆ ಎಸ್​ಟಿ ಮೀಸಲಾತಿ ಸಿಗುವ ವಿಶ್ವಾಸವಿದೆ ಎಂದರು.

ಬ್ರಿಟಿಷ್​ರ ಅವಧಿಯಲ್ಲಿ ನಮಗೆ ಎಸ್​ಟಿ ಮೀಸಲಾತಿ ಸಿಕ್ಕಿತ್ತು. ಸ್ವಾತಂತ್ರ್ಯ ನಂತರ ಅದನ್ನು ಕಸಿದುಕೊಳ್ಳಲಾಗಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಈಗ ಎಸ್​ಟಿ ಮೀಸಲಾತಿಯಿದೆ. ಕನಕದಾಸರಿಗೆ ಶ್ರೀಕೃಷ್ಣ ಪರಮಾತ್ಮರೇ ಒಲಿದಿದ್ದಾರೆ. ಕುರುಬರ ಕೂಗಿಗೆ ಮೋದಿಯೂ ಒಲಿಯುತ್ತಾರೆ ಎಂದರು.

ಸಚಿವ ಎಂಟಿಬಿ ನಾಗರಾಜ ಮಾತನಾಡಿ, ಎಸ್​ಟಿ ಮೀಸಲಾತಿ ನಮ್ಮ ಹಕ್ಕು. ರಾಜ್ಯದಲ್ಲಿ 60ಲಕ್ಷ ಕುರುಬರ ಜನಸಂಖ್ಯೆಯಿದೆ. ನಾವು 4ನೇ ಸ್ಥಾನದಲ್ಲಿದ್ದೇವೆ. ಹಿಂದಿನ ಯಾವ ಸರ್ಕಾರಗಳೂ ಇಷ್ಟು ಜನರಿಗೆ ಸಚಿವ ಸ್ಥಾನ ಕೊಟ್ಟಿರಲಿಲ್ಲ. ಈಗ ನಾಲ್ವರು ಸಚಿವರಿದ್ದು, ನಮ್ಮ ಶಕ್ತಿ ಹೆಚ್ಚಿದೆ ಎಂದರು.

ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ, ಸಚಿವ ಆರ್. ಶಂಕರ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ವಿಧಾಣ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಕೆ. ಮುಕುಡಪ್ಪ, ಕೆ.ಇ. ಕಾಂತೇಶ್, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಎಸ್​ಎಫ್​ಎನ್ ಗಾಜಿಗೌಡ್ರ ಇತರರಿದ್ದರು.

ಕನಕದಾಸರ ಗದ್ದುಗೆ ಪೂಜೆ

ಸಂಜೆ ಕಾಗಿನೆಲೆಯ ಕನಕದಾಸರ ಗದ್ದುಗೆ ಹಾಗೂ ಮೂರ್ತಿಗೆ ಪೂಜೆ ಸಲ್ಲಿಸಿ ಸಾರೋಟದಲ್ಲಿ ಕನಕದಾಸರ ಮೂರ್ತಿಯ ನ್ನಿಟ್ಟುಕೊಂಡು ಸಾವಿರಾರು ಜನರೊಂದಿಗೆ ಪಾದಯಾತ್ರೆ ಆರಂಭಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net