

ಸವಣೂರ: ಗ್ರಾಪಂನಿಂದ ಹಣ ಪಡೆದುಕೊಂಡು ತ್ಯಾಜ್ಯ ವಿಲೇವಾರಿ ಮಾಡುವ ಆಟೋ ಟಿಪ್ಪರ್ ವಾಹನ ನೀಡದೆ ಮೋಸ ಮಾಡಿದ ಕುರಿತು ಇಲ್ಲಿಯ ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಯ ಆರ್.ಕೆ. ಸಲ್ಯೂಷನ್‌ನ ರವಿ ನಾಯ್ಕರ ಎಂಬುವರ ಮೇಲೆ ಪ್ರಕರಣ ದಾಖಲಾಗಿರುವುದು.
ಈ ಕುರಿತು ತಾಲೂಕಿನ ಕುರುಬರಮಲ್ಲೂರ ಗ್ರಾಪಂ ಪಿಡಿಒ ಅನ್ನಪೂರ್ಣ ಜಿ. ದೂರು ದಾಖಲಿಸಿದ್ದಾರೆ. ಆರೋಪಿಯು ಗ್ರಾಪಂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಯನಿರ್ವಹಣೆ ಮಾಡಲು ಆಟೋ ಟಿಪ್ಪರ್ ವಾಹನ ನೀಡುವುದಾಗಿ ಒಪ್ಪಿಕೊಂಡಿದ್ದಾನೆ. ಟೆಂಡರ್‌ನಲ್ಲಿ ತಿಳಿಸಿದ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದ ಬಳಿಕ 2021 ಜುಲೈ 19ರಂದು 4.59 ಲಕ್ಷ ರೂ. ಹಣವನ್ನು ಆರ್‌ಟಿಜಿಎಸ್ ಮೂಲಕ ಪಡೆದುಕೊಂಡಿದ್ದಾನೆ. ಆದರೆ, ಈವರೆಗೂ ವಾಹನ ನೀಡದೆ ಮೋಸ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.