ಹಾಸ್ಟೆಲ್ ಮೇಲೆ ಕಲ್ಲು ತೂರಾಟ ನಡೆಸಿದ್ದಕ್ಕೆ ಖಂಡನೆ: ಜಿಲ್ಲಾ ಕುರುಬರ ಸಂಘದಿಂದ ಪ್ರತಿಭಟನೆ

Kurubara Sanga protest mandya
Published on

ಮಂಡ್ಯ: ಹನುಮಾನ್ ಧ್ವಜ ತೆರವು ವಿರೋಧಿಸಿ ನಗರದಲ್ಲಿ ನಡೆದ ಪಾದಯಾತ್ರೆ ವೇಳೆ ಕುರುಬರ ವಿದ್ಯಾರ್ಥಿ ನಿಲಯದ ಮೇಲೆ ಕಲ್ಲು ತೂರಾಟ ನಡೆಸಿ ಭಕ್ತ ಕನಕದಾಸ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಫ್ಲೆಕ್ಸ್ ಹರಿದು ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕುರುಬರ ಸಂಘದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘದ ಆವರಣದಿಂದ ಮೆರವಣಿಗೆ ಹೊರಟ ಸಂಘದ ಸದಸ್ಯರು, ಬಿಜೆಪಿ ಮತ್ತು ಜೆಡಿಎಸ್ ನಾಯಕರ ರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಅಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿರುವ ಸಂಘದ ವಿದ್ಯಾರ್ಥಿ ನಿಲಯದ ಕಿಟಕಿ ಗಾಜುಗಳನ್ನು ಕಲ್ಲು ಮತ್ತು ದೊಣ್ಣೆಯಿಂದ ಹೊಡೆದು ಹಾಕಲಾಗಿದೆ. ಅದೇ ರೀತಿ ಕನಕದಾಸರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ಫ್ಲೆಕ್ಸ್‌ಗಳಿಗೂ ಅವಮಾನ ಮಾಡುವ ಮೂಲಕ ಹಿಂದುಳಿದ ಸಮುದಾಯದ ವಿರುದ್ಧ ದ್ವೇಷ ಸಾಧಿಸಿದ್ದಾರೆ. ದೌರ್ಜನ್ಯ ದಬ್ಬಾಳಿಕೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕು. ಅವರಿಗೆ ಕುಮ್ಮಕ್ಕು ನೀಡಿದವರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಜನರ ನೆಮ್ಮದಿ ಹಾಳು ಮಾಡಲು ಮುಂದಾಗಿರುವ ಬಿಜೆಪಿ ಮತ್ತು ಜೆಡಿಎಸ್, ಶಾಂತಿ ಕದಡಿ ಕೋಮುದಳ್ಳುರಿಗೆ ತಳ್ಳುವ ಹುನ್ನಾರ ಮಾಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಯೋಜನೆಗಳನ್ನು ಸಹಿಸದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಷಡ್ಯಂತ್ರ ಮಾಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗುರಿಯಾಗಿಸಿ ದಾಂಧಲೆ ಮಾಡಿದ್ದಾರೆ. ಜಿಲ್ಲೆಯ ಜನತೆ ಕೋಮು ದ್ವೇಷಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಸುರೇಶ್, ಪ್ರಧಾನ ಕಾರ್ಯದರ್ಶಿ ಎಂ.ಜೆ.ಶಶಿಧರ, ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಎಸ್.ಎನ್.ರಾಜು, ಕೆ.ಎಚ್.ನಾಗರಾಜು, ಶಿವರಾಮು, ಎಂ.ಮರಿಹೆಗ್ಡೆ, ಮಹೇಶ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net