ಮೇ 8ರಂದು ನಗರಕ್ಕೆ ಸಿಎಂ ಸಿದ್ದರಾಮಯ್ಯ ಆಗಮನ: ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ಮಾಹಿತಿ

CM Siddaramaiah
Published on

ಮಂಡ್ಯ: ಜಿಲ್ಲಾ ಕುರುಬರ ಸಂಘದ ವತಿಯಿಂದ ನಿರ್ಮಾಣ ಮಾಡುತ್ತಿರುವ ವಿದ್ಯಾರ್ಥಿ ನಿಲಯದ ಕಟ್ಟಡದ ಶಂಕುಸ್ಥಾಪನ ಸಮಾರಂಭಕ್ಕೆ ಮೇ 8ರಂದು ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್ ತಿಳಿಸಿದರು.

ನಗರದ ಕನಕ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ಗಳಿದ್ದರೆ ಹಿಂದುಳಿದ ವರ್ಗಗಳ ಸಮಾಜದ ಮಕ್ಕಳಿಗೆ ಶಿಕ್ಷಣ ಸಿಗುತ್ತದೆ. ಶೋಷಿತ ಸಮುದಾಯದ ಮಕ್ಕಳು ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ಎಂದರು.

ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಮಾತನಾಡಿ, ಅದೇ ದಿನ ಮೈಷುಗರ್ ಕಾರ್ಖಾನೆ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಂಚಿನ ಪುತ್ತಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸುವರು. ಜತೆಗೆ ವಿದ್ಯುತ್ ಯೂನಿಟ್ ಘಟಕವನ್ನು ಉದ್ಘಾಟಿಸುವರು ಎಂದು ತಿಳಿಸಿದರು.

ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಚ್.ನಾಗರಾಜು, ಎಲ್.ಸಂದೇಶ್, ವಿಜಯಲಕ್ಷ್ಮೀ ರಘುನಂದನ್, ಅಮ್ಜದ್ ಪಾಷ, ಸಿ.ಡಿ.ವಿಜಯಕುಮಾರ್, ಬೀರಪ್ಪ, ಸಾತನೂರು ಕೃಷ್ಣ, ಡಿ.ರಮೇಶ್, ವೆಂಕಟೇಶ್, ಸೋಮಶೇಖರ್, ಸತೀಶ್, ರಾಜು, ಮರಿ ಹೆಗ್ಗಡೆ, ಎನ್.ದೊಡ್ಡಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net