

ತುಮಕೂರು: ಹಿಂದೆ ಸಂಸತ ಕಲಿತರೆ ಕಾದ ಸೀಸದ ಶಿಕ್ಷೆ ನಿಗಧಿಯಾಗಿತ್ತು. ಆದರೆ ಈಗ ಶಿಕ್ಷಣ ನಮ್ಮ ಮೂಲಭೂತ ಹಕ್ಕು ಆದ ಮೇಲೆ ಎಲ್ಲರಿಗೂ ಶಿಕ್ಷಣ ಸಿಗುತ್ತಿದೆ. ನಿಮ್ಮ ಅನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ಕಾಳಿದಾಸನ ನಾಲಿಗೆ ಮೇಲೆ ಬ್ರಹ್ಮ ಅಕ್ಷರ ಬರೆದಿದ್ದಕ್ಕೆ ಮಹಾ ಸಾಹಿತಿಯಾದ ಎನ್ನುವ ಮಾತನ್ನೆಲ್ಲಾ ನಂಬೇಡಿ. ವಾಲ್ಮೀಕಿ ದರೋಡೆಕೋರ ಆಗಿದ್ದ ಅನ್ನುವುದ ನ್ನೆಲ್ಲಾ ನಂಬೇಡಿ. ಶೂದ್ರರು ವಿದ್ಯಾವಂತರಾಗಿ ಏನಾದರೂ ಮಹತ್ವವಾದದ್ದನ್ನು ಬರೆದರೆ ಅವರ ಬಗ್ಗೆ ಇಂತಹ ಕಟ್ಟುಕಥೆಗಳನ್ನು ಕಟ್ಟಿ ಬಿಡುತ್ತಾರೆ. ಇದನ್ನೆಲ್ಲಾ ನಂಬಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕುರುಬ ಸಾಂಸ್ಕೃತಿಕ ಪರಿಷತ್ ವತಿಯಿಂದ ಆಯೋಜಿಸಿರುವ 2 ದಿನಗಳ ಕುರುಬ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಮನುಸ್ಮೃತಿ ಯಿಂದಾಗಿ ನಮ್ಮಲ್ಲಿ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು. ಈ ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಯಿತು. ಇದನ್ನು ತೊಡೆದುಹಾಕಲು ಎಲ್ಲರೂ ಶಿಕ್ಷಣ ಪಡೆದಿದ್ದು ಕಾರಣವಾಯಿತು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ರಾಜ್ಯ ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಪತ್ರಿಕೋದ್ಯಮಿ ಎಸ್.ನಾಗಣ್ಣ, ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ, ಶ್ರೀದೇವಿ ಶಿಕ್ಷಣ ಸಂಸ್ಥೆ ಟ್ರಸ್ಟಿ ಡಾ.ರಮಣ್ ಹುಲಿನಾಯ್ಕರ್, ಇನ್ ಸೈಟ್ ಸಂಸ್ಥೆಯ ಜಿ.ಬಿ.ವಿನಯಕುಮಾರ್ ಉಪಸ್ಥಿತರಿದ್ದರು.