

ಮೈಸೂರು: ವೀರಶೈವ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸರ್ಕಾರ ಸಾಮಾಜಿಕ ತಳಹದಿಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಸಚಿವ ಸಂಪುಟ ದಲ್ಲಿ ಎಲ್ಲ ಸಮಾಜಗಳಿಗೂ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿರಬಹುದು. ಆದರೆ, ಸರ್ಕಾರ ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ. ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಏಳು ಮಂದಿ ವೀರಶೈವ ಲಿಂಗಾಯತ ಸಚಿವರಿದ್ದಾರೆ. ಸಿದ್ದರಾಮಯ್ಯ ಕುರುಬ ಸಮಾಜದ ಓಲೈಕೆ ಮಾಡುತ್ತಿಲ್ಲ, ಎಲ್ಲ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ವೈಯಕ್ತಿಕವಾದದ್ದು. ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದ್ದು, ಎಲ್ಲರಿಗೂ ಮಾತನಾಡುವ ಹಕ್ಕು ಇದೆ. ಆದರೆ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಿದರೆ ಉತ್ತಮ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಜಾತಿ ಆಧಾರದಲ್ಲಿ ಅಧಿಕಾರಿಗಳನ್ನು ನೇಮಕ ಹಾಗೂ ಪೋಸ್ಟಿಂಗ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸರ್ಕಾರ ಬೀಳುತ್ತದೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹಗಲುಗನಸು ಕಾಣುತ್ತಿದ್ದಾರೆ. ಸರ್ಕಾರಕ್ಕೆ ಸ್ಪಷ್ಟ ಬಹುಮತ ಇರುವಾಗ ಸರ್ಕಾರ ಬೀಳಲು ಹೇಗೆ ಸಾಧ್ಯ? ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲ ಎಂಬುದು ಅವರ ಹೇಳಿಕೆಯಿಂದ ಮನದಟ್ಟಾಗುತ್ತದೆ. ಪ್ರಸ್ತುತ ಯಾವುದೇ ರೀತಿಯ ‘ಆಪರೇಷನ್ ಕಮಲ’ ನಡೆಸಲು ಸಾಧ್ಯವಿಲ್ಲ, ಇದೀಗ ಅವರವರೇ ಆಪರೇಷನ್ ಮಾಡಿಕೊಳ್ಳಬೇಕಷ್ಟೆ ಎಂದು ವ್ಯಂಗ್ಯವಾಡಿದರು.
ಹುಬ್ಬಳ್ಳಿ ಗಲಬೆ ಪ್ರಕರಣವನ್ನು ಹಿಂಪಡೆಯುವ ವಿಚಾರವಾಗಿ ಸಚಿವಸಂಪುಟ ಉಪ ಸಮಿತಿ ರಚಿಸಲಾಗಿದೆ. ರಾಜಕೀಯ ಪ್ರೇರಿತವಾಗಿ ದಾಖಲಾಗಿರುವ ಪ್ರಕರಣ ಹಾಗೂ ಕ್ರಿಮಿನಲ್ ಅಲ್ಲದ ಪ್ರಕರಣಗಳನ್ನು ಪರಿಶೀಲಿಸಿ ಅಂತಹ ಪ್ರಕರಣಗಳನ್ನು ಕೈ ಬಿಡಲು ಸಮಿತಿ ಶಿಫಾರಸು ಮಾಡಲಿದೆ ಎಂದು ಹೇಳಿದರು.
ರಾಜ್ಯದಲ್ಲೂ ಜಾತಿ ಜನಗಣತಿಯನ್ನು ಬಿಡುಗಡೆ ಮಾಡಲಾಗುವುದು. ನಮ್ಮ ಸರ್ಕಾರವೇ ಕಳೆದ ಬಾರಿ ಜಾತಿ ಜನಗಣತಿ ನಡೆಸಿದ್ದು, ಸಮೀಕ್ಷೆಗೆ 150 ಕೋಟಿ ರೂ.ವೆಚ್ಚ ಮಾಡಲಾಗಿದೆ. ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಮಾಡಿರುವುದು ಸ್ವಾಗತ, ಇದೇ ರೀತಿ ದೇಶದ ಎಲ್ಲ ಕಡೆಗಳಲ್ಲೂ ಜಾತಿ ಜನಗಣತಿ ಬಿಡುಗಡೆಯಾಗಬೇಕಾಗಿದೆ ಎಂದರು.
ಶಿವಮೊಗ್ಗದಲ್ಲಿ ಈದ್ ಮೆರವಣಿಗೆ ಹೋಗುವ ಸಂದರ್ಭ ಕೆಲವು ಕಿಡಿಗೇಡಿಗಳು ಕಲ್ಲು ಹೊಡೆದಿದ್ದು, ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಅನಗತ್ಯ ಆರೋಪ ಮಾಡುತ್ತಿದೆ. ಅವರಿಗೆ ಆರೋಪ ಮಾಡುವುದು ಬಿಟ್ಟು ಬೇರೇನು ಗೊತ್ತಿಲ್ಲ, ಅವರಿಗೆ ಅಭಿವೃದ್ಧಿ ಗೊತ್ತಿಲ್ಲ ಎಂದು ಟೀಕಿಸಿದರು.