ಹುಬ್ಬಳ್ಳಿ: ಪ್ರದೇಶ ಕುರುಬ ಸಮಾಜ ಒಕ್ಕೂಟದ ವತಿಯಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಆ. 14ರಂದು ಬೆಳಗ್ಗೆ 11ಕ್ಕೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಇನ್ನೂರಕ್ಕೂ ಹೆಚ್ಚು ಕುರಿಗಳು ಹಾಗೂ ಸಮಾಜದ ಮುಖಂಡರೊಂದಿಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಾಗುವುದು.
ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಬೇಕು, ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಅವಕಾಶ ನೀಡಬೇಕು. ಅರಣ್ಯ ಸಚಿವರು ಕಾಡಿನಲ್ಲಿ ಕುರಿ ಮೇಯಿಸಲು ವಿಧಿಸಿರುವ ನಿರ್ಬಂಧ ಹಿಂಪಡೆಯಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೆ ಮುಂಚೆ ಕುರುಬ ಸಮಾಜಕ್ಕೆ ಮೀಸಲಾತಿ ಕೊಡಿಸುವ ಬಗ್ಗೆ ಮಾತನಾಡಿದ್ದರು. ಈಗ ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಶೀಘ್ರ ಸಮಾಜದ ಬೇಡಿಗಳನ್ನು ಈಡೇರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆ ಬಹಿಷ್ಕಾರ ಮಾಡುವ ಹೋರಾಟ ಅನಿವಾರ್ಯವಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಸಿದ್ದಣ್ಣ ಎಚ್ಚರಿಸಿದರು.
ಒಕ್ಕೂಟದ ರವಿರಾಜ ಕಂಬಳಿ, ಚಂದ್ರಶೇಖರ ಕಣವಿ, ಡಿ.ಟಿ. ಪಾಟೀಲ್, ಸಿದ್ದಣ್ಣ ಪ್ಯಾಟಿ ಗೋಷ್ಠಿಯಲ್ಲಿದ್ದರು.