

ಮಂಗಳೂರು: ತುಳುನಾಡಿನ ಸಂಸ್ಕೃತಿಯ ಮೂಲವೇ ಬೇಸಾಯ. ತುಳುವರ ಸಾಂಸ್ಕೃತಿಕ ಬದುಕು ಒಂದಲ್ಲ ಒಂದು ರೀತಿಯಲ್ಲಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿದೆ. ನಮ್ಮ ಪೂರ್ವಜರ ನಡೆ ನುಡಿ , ನಂಬಿಕೆ- ಆಚರಣೆ ಗಳಿಗೆ ಕೃಷಿಯೇ ಪ್ರೇರಣೆಯಾಗಿತ್ತು. ಕೆಸರು ಗದ್ದೆಯೇ ಜೀವನದ ಒಸರಾಗಿತ್ತು ಎಂದು ಕುರ್ನಾಡು ಅಮ್ಮೆಂಬಳ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಹರಿ ಭಟ್ ಹೇಳಿದರು.
ಅವರು ವಿಶ್ವವಿದ್ಯಾಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ವಿ.ವಿ. ಸಂಧ್ಯಾ ಕಾಲೇಜು ಮಂಗಳೂರು ಇಲ್ಲಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಹಾಗೂ ‘ಪರಪು’ ತುಳು ಎಂ.ಎ. ಹಳೇ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಕುರ್ನಾಡು ಪದ್ರಾಡ್ ಮುಡಿ ಗದ್ದೆಯಲ್ಲಿ ಭಾನುವಾರ ನಡೆದ ‘ದಿನ ಇಡೀ ಪದ್ರಾಡ್ ಮುಡಿ - ಕೆಸರ್ ಕಂಡೊಡು ಗೊಬ್ಬು ಗಮ್ಮತ್ತ್ ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಹಾಗೂ ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ ಮಾಧವ ಎಂ.ಕೆ., ತರಗತಿಯಲ್ಲಿ ಕಲಿತ ವಿಷಯ ವಿದ್ಯಾರ್ಥಿಗೆ ಮನನ ಆಗಬೇಕಾದರೆ ಈ ರೀತಿಯ ಪ್ರಾಯೋಗಿಕ ರೀತಿಯಿಂದ ಮಾತ್ರ ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ‘ಪರಪು’ ತುಳು ಎಂ.ಎ. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಕಣ್ವತೀರ್ಥ ಮಾತನಾಡಿ, ಈಗಿನ ಯುವ ಜನಾಂಗ ಹಳ್ಳಿ ಜೀವನದ ಕಡೆ ಅಕರ್ಷಿತರಾಗುತ್ತಿದ್ದಾರೆ. ಹಾಗಾಗಿ ಕೃಷಿ ಜೀವನ ಮರಿಕಳಿಸುವ ಆಶಾವಾದ ಮೂಡಿದೆ ಎಂದರು.
ಉಪನ್ಯಾಸಕರಾದ ಮಣಿ ಎಂ.ರೈ ಸ್ವಾಗತಿಸಿ , ಪ್ರಸ್ತಾವನೆಗೈದರು. ಗೀತಾ ಜೈನ್ ವಂದಿಸಿದರು. ಪ್ರಸಾದ್ ಅಂಚನ್ ನಿರೂಪಿಸಿದರು.
ಬಳಿಕ ಕೆಸರಿನ ಗದ್ದೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಊರವರು ಹಾಗೂ ತುಳು ವಿದ್ಯಾರ್ಥಿಗಳು ಭಾಗವಹಿಸಿದರು.
ಸಾಯಂಕಾಲ ನಡೆದ ಸಮಾರೋಪ ಕಾರ್ಯಕ್ರಮ ದಲ್ಲಿ ಪದ್ರಾಡ್ ಮುಡಿ ಆದಿಮಾಯೆ ನಾಗಬ್ರಹ್ಮ ದೇವಸ್ಥಾನದ ಪಾತ್ರಿ ರಮೇಶ್ ಕುಮಾರ್ ಹಾಗೂ ಮಂಗಳೂರು ಶ್ರೀ ಶಬರಿ ಕೆಟರರ್ಸ್ ನ ರಾಜೇಶ್ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನೀತಾ ಗಟ್ಟಿ ಹಾಗೂ ಕಿರಣ್ ದಾಸ್ ಗಟ್ಟಿ ದಂಪತಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಪ್ರಶಾಂತಿ ಶೆಟ್ಟಿ ಇರುವೈಲು, ಜಯಲಕ್ಷ್ಮಿ ಆರ್. ಶೆಟ್ಟಿ, ರಾಹುಲ್ , ಹರೀಶ್ ಅಮೈ, ಚಂದ್ರಹಾಸ ಕಣಂತೂರು ಸ್ಪರ್ಧೆಗಳನ್ನು ನಡೆಸಿಕೊಟ್ಟರು. ತುಳು ಎಂ.ಎ. ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.