

ಕಾರವಾರ: ಅರಬ್ಬಿ ಸಮುದ್ರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ ಗುರುವಾರ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ದೋಣಿಯಲ್ಲಿ ತೆರಳಿ ಅಲಂಕೃತ ದೇವರ ದರ್ಶನ ಪಡೆದು, ಹರಕೆ ತೀರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಬೋಟ್‌ನಲ್ಲಿ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು.
ಕಡವಾಡದ ಸಪ್ರೆ ಕುಟುಂಬದಲ್ಲಿ ಪೂಜಿತ ನರಸಿಂಹ ದೇವರ ಉತ್ಸವ ಮೂರ್ತಿಯನ್ನು ಗುರುವಾರ ಬೆಳಗ್ಗೆ ಪಲ್ಲಕ್ಕಿಯಲ್ಲಿ ಕೋಡಿಬಾಗಕ್ಕೆ ಕರೆತಂದು ಅಲ್ಲಿಂದ ಅಲಂಕೃತ ದೋಣಿಯಲ್ಲಿ ದಡದಿಂದ ಸುಮಾರು 6 ಕಿಮೀ ದೂರದಲ್ಲಿರುವ ದ್ವೀಪಕ್ಕೆ ಕೊಂಡೊಯ್ಯಲಾಯಿತು.
ದ್ವೀಪದ ಗುಡ್ಡದ ತುದಿಯಲ್ಲಿರುವ ಜಾತ್ರೆ ಕಟ್ಟೆಯ ಮೇಲೆ ದೇವರನ್ನು ಪ್ರತಿಷ್ಠಾಪಿಸಿ ಪಂಚಾಮೃತ ಅಭಿಷೇಕ, ವಿಷ್ಣು ಸಹಸ್ರನಾಮ ಪೂಜೆ, ಅಲಂಕಾರ ಮಾಡಲಾಯಿತು. ನಂತರ ಬಂದ ಹಲವು ಭಕ್ತರು ಬಾಳೆ ಹಣ್ಣಿನ ಗೊನೆಗಳನ್ನು ಹರಕೆಯಾಗಿ ಒಪ್ಪಿಸಿ ಪೂಜೆ ಸಲ್ಲಿಸಿದರು. ಕಡವಾಡದಿಂದ ಆಗಮಿಸಿದ ನೂರಾರು ಭಕ್ತರು ಸ್ಥಳದಲ್ಲೇ ಅಡುಗೆ ಮಾಡಿ, ದೇವರಿಗೆ ನೈವೇದ್ಯ ಮಾಡಿ, ಅಲ್ಲೇ ಪ್ರಸಾದ ಭೋಜನ ಸ್ವೀಕರಿಸಿದರು. ರಾತ್ರಿಯಿಡೀ ದೇವರ ಜತೆ ಕಡವಾಡದ ಭಕ್ತರು ದ್ವೀಪದಲ್ಲೇ ಉಳಿದು ಜಾಗರಣೆ ಮಾಡುವರು. ಜ.೨೬ ರಂದು ಬೆಳಗ್ಗೆ ದೇವರು ವಾಪಸ್ ದೋಣಿಯ ಮೂಲಕ ಕೋಡಿಬಾಗಕ್ಕೆ ಆಗಮಿಸಿ ಕಡವಾಡಕ್ಕೆ ತೆರಳಲಿದೆ.
ಸುರಕ್ಷತೆಗೆ ಕ್ರಮ:
2019 ರ ಜನವರಿ 23 ರ ಜಾತ್ರೆಗೆ ತೆರಳಿ ವಾಪಸಾಗುತ್ತಿದ್ದ ಬೋಟ್ ಸಮುದ್ರದ ನಡುವೆ ಮಗುಚಿ 16 ಜನ ಮೃತಪಟ್ಟಿದ್ದರು. ಮಹಾ ದುರಂತದ ನಂತರ ಜಿಲ್ಲಾಡಳಿತ ಎಚ್ಚೆತ್ತಿದ್ದು, ಭಕ್ತರ ಸುರಕ್ಷತೆಗೆ ಕ್ರಮ ವಹಿಸಿದೆ. ಮೊದಲ ವಿವಿಧೆಡೆಗಳಿಂದ ಕೂರ್ಮಗಡಕ್ಕೆ ಬೋಟ್ ವ್ಯವಸ್ಥೆ ಇರುತ್ತಿತ್ತು. ಈ ಬಾರಿ ಬೈತಖೋಲ್‌ನಿಂದ ಮಾತ್ರ ಮೀನುಗಾರಿಕೆ ದೋಣಿಗಳಲ್ಲಿ ಮಾತ್ರ ತೆರಳಲು ಅವಕಾಶ ಕಲ್ಪಿಸಲಾಗಿತ್ತು. ಜಾತ್ರೆಗೆ ತೆರಳುವ ಪ್ರತಿಯೊಬ್ಬರ ಹೆಸರನ್ನು ನೋಂದಾಯಿಸಿಕೊಂಡು ದೋಣಿ ಹತ್ತಲು ಅವಕಾಶ ಕಲ್ಪಿಸಲಾಯಿತು. ದೋಣಿಗಳಲ್ಲಿ ಸಾಕಷ್ಟು ಲೈಪ್ ಜಾಕೆಟ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, 70 ವರ್ಷದ ಮೇಲ್ಪಟ್ಟ ವೃದ್ಧರು ಜಾತ್ರೆಗೆ ತೆರಳುವುದನ್ನು ನಿಷೇಧಿಸಲಾಗಿತ್ತು. ಬೈತಖೋಲ್, ಹಾಗೂ ಕೂರ್ಮಗಡದಲ್ಲಿ ಸಾಕಷ್ಟು ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಕರಾವಳಿ ಕಾವಲುಪಡೆಯ ಮೂರು ಬೋಟ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.