ಜಾತ್ರೆ ಆಚರಿಸದಂತೆ ಖಡಕ್ ಎಚ್ಚರಿಕೆ

ALM 17-1
Published on

ಆಲಮೇಲ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ತಾಲೂಕಿನ ಕುರಬತ್ತಹಳ್ಳಿ ಗ್ರಾಮದಲ್ಲಿ ಏ.21 ರಂದು ನಡೆಯಬೇಕಿದ್ದ ಲಕಮ್ಮಾದೇವಿ ಜಾತ್ರೆಯನ್ನು ರದ್ದುಗೊಳಿಸುವಂತೆ ಪಿಎಸ್‌ಐ ನಿಂಗಪ್ಪ ಪೂಜಾರಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು.
ಜಾತ್ರೆ ಅಂಗವಾಗಿ ದೇವಣಗಾಂವ ಗ್ರಾಪಂದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಗ್ರಾಮಸ್ಥರಿಗೆ ತಿಳಿಹೇಳಿದರು.
ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ವೈರಸ್ ಹೊಡೆದೋಡಿಸಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ. ಒಂದು ವೇಳೆ ಸುಳ್ಳು ಸುದ್ದಿ ಹರಡಿಸುತ್ತಿದ್ದರೆ ಕೂಡಲೇ ನಮ್ಮ ಗಮನಕ್ಕೆ ತರಬೇಕು. ಅಂಗನವಾಡಿ, ಆಶಾ ಕಾರ್ಯಕರ್ತರು ಆರೋಗ್ಯ ಮಾಹಿತಿ ಪಡೆದುಕೊಳ್ಳಲು ಬಂದಾಗ ಅವರಿಗೆ ಸಂಪೂರ್ಣ ಮಾಹಿತಿ ನೀಡಿ ಎಂದರು.
ದೇವಣಗಾಂವ ಪಂಚಾಯಿತಿ ಕಾರ್ಯದರ್ಶಿ ರಾಜು ನೌಟಾಕ ಜಾತ್ರಾ ಕಮಿಟಿ ಸದಸ್ಯರಿಗೆ ಜಾತ್ರೆ ರದ್ದುಗೊಳಿಸಲು ಜಾತ್ರಾ ಕಮಿಟಿ ಸದಸ್ಯರಿಗೆ ನೋಟಿಸ್ ನೀಡಿದರು.
ಚಂದ್ರಾಮ ಸಾಲೋಟಗಿ, ಸಾಹೇಬಗೌಡ ಬಿರಾದಾರ, ಬಸವರಾಜ ಕಳೇಮನಿ, ಮಲಕಣ್ಣ ಬಳೊಂಡಗಿ, ನಾಡಗೌಡ ಪಾಟೀಲ, ಉಮೇಶ ಬರೇಗಾಲ, ಗ್ರಾಮಲೆಕ್ಕಾಧಿಕಾರಿ ಮೇಘಾ ಕೊಳಸೆ, ಆಶಾ ಕಾರ್ಯಕರ್ತೆ ಶೋಭಾ ಸಾಗರ, ಶೃತಿ ದ್ಯಾಮಗೊಂಡ ಇದ್ದರು.

ಜಾತ್ರೆ, ಸಾಮೂಹಿಕ ಪ್ರಾರ್ಥನೆ ನಡೆಸುವುದನ್ನು ಹಾಗೂ ಯಾರಾದರೂ ಮರಣ ಹೊಂದಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವುದನ್ನು ನಿಷೇಧಿಸಲಾಗಿದೆ. ಯಾರಾದರೂ ಕಾನೂನು ಉಲ್ಲಂಘಿಸಿದರೆ ಅಂಥ ಜಾತ್ರಾ ಕಮಿಟಿ ಅಥವಾ ಪ್ರಾರ್ಥನಾ ಕಮಿಟಿ ಮೇಲೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ನಿಂಗಪ್ಪ ಪೂಜಾರಿ, ಪಿಎಸ್‌ಐ, ಆಲಮೇಲ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net