ವಾರದ ಸಂತೆಗೆ ತಿಲಾಂಜಲಿ! : ಕುಪ್ಪೆಪದವು ಮಾರುಕಟ್ಟೆ ಕಟ್ಟಡ ಧ್ವಂಸಗೊಳಿಸಿದ ಗ್ರಾಮ ಪಂಚಾಯಿತಿ

kuppepadavu
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಹೊಸ ಮಾರುಕಟ್ಟೆ ನಿರ್ಮಾಣದ ಭರವಸೆ ನೀಡಿರುವ ಕುಪ್ಪೆಪದವು ಗ್ರಾಮ ಪಂಚಾಯಿತಿ ಆಡಳಿತವು 30 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಕುಪ್ಪೆಪದವು ಮಾರುಕಟ್ಟೆ ಕಟ್ಟಡ ಕೆಡವಿ, ಸುಮಾರು 100 ವರ್ಷಗಳ ಇತಿಹಾಸವಿರುವ ಕುಪ್ಪೆಪದವು ಶನಿವಾರ ಸಂತೆಗೆ ತಿಲಾಂಜಲಿ ನೀಡಿದೆ.

ಕುಪ್ಪೆಪದವಿನಲ್ಲಿ ನಿನ್ನೆ- ಮೊನ್ನೆಯವರೆಗೆ ಹೆಂಚಿನ ಮಹಡಿಯ ತೆರೆದ ಮಾರುಕಟ್ಟೆ ಇತ್ತು. ಇದೀಗ ಇದಕ್ಕೆ ಪರ್ಯಾಯವಾಗಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಿಸುವ ನೆಪವೊಡ್ಡಿ ಮಾರುಕಟ್ಟೆ ಕಟ್ಟಡ ಧ್ವಂಸಗೊಳಿಸಲಾಗಿದೆ. ಈ ಮೂಲಕ ಗ್ರಾಮ ಪಂಚಾಯಿತಿ ಆಡಳಿತ ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಶಂಕೆ ವ್ಯಕ್ತವಾಗಿದೆ.

ಸಚಿವರಾಗಿದ್ದ ರಮಾನಾಥ ರೈ ಮುತುವರ್ಜಿಯಲ್ಲಿ 1990-93ರಲ್ಲಿ ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿತ್ತು. ಅಲ್ಲಿಯವರೆಗೆ ಆ ಜಾಗದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಪ್ರಸಕ್ತ ಮಾರುಕಟ್ಟೆ ಕಟ್ಟಡ ಧ್ವಂಸಗೊಳಿಸಲಾದ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಜತೆಗೆ ಇಲ್ಲೇ ತೆರೆದ ಮಾರುಕಟ್ಟೆ ಕಟ್ಟಡ ನಿರ್ಮಿಸಲಾಗಿತ್ತು. ಹೊಸ ಜಾಗದಲ್ಲಿ ವಾರದ ಸಂತೆ ಸೊರಗಿ ಹೋಗಿತ್ತು. ಹಳೆಯ ತೆರೆದ ಮಾರುಕಟ್ಟೆ ಕಟ್ಟಡವು ಸ್ಥಳೀಯ ನಿವಾಸಿಯೊಬ್ಬರ ಕಟ್ಟಡಕ್ಕೆ ಅಡ್ಡವಾಗಿತ್ತು. ಇದೇ ಕಾರಣಕ್ಕೆ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ಪ್ರಸ್ತಾಪ ಬಂದಿದ್ದು, ಇದೀಗ ತೆರೆದ ಮಾರುಕಟ್ಟೆ ಕಟ್ಟಡ ಧ್ವಂಸ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪಂಚಾಯಿತಿ ಆಡಳಿತ ಹೇಳುವಂತೆ ಸರ್ವೇ ನಂಬ್ರ 100ರಲ್ಲಿದ್ದ ಹಳೆಯ ಮಾರುಕಟ್ಟೆ ಕಟ್ಟಡ ಧ್ವಂಸ ಮಾಡಲಾಗಿದೆಯಾದರೂ ಅಲ್ಲಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಿಸದೆ ಬೇರೆಡೆ ಪ್ರಸ್ತಾವಿಸಿದ್ದು ಯಾಕೆ ಎಂದು ಪ್ರಶ್ನಿಸಿರುವ ಸಾರ್ವಜನಿಕರು, ಹೊಸ ಜಾಗದಲ್ಲಿ ಮಾರುಕಟ್ಟೆ ನಿರ್ಮಿಸಲು ಆಕ್ಷೇಪಗಳು ಬಂದಲ್ಲಿ ಕುಪ್ಪೆಪದವಿನಲ್ಲಿ ಮಾರುಕಟ್ಟೆ ಇಲ್ಲದಂತಾಗುತ್ತದೆ ಎಂದಿದ್ದಾರೆ.

ಇಲ್ಲಿರುವ ಪಶು ಆಸ್ಪತ್ರೆ ಪಕ್ಕದ ಸರ್ಕಾರಿ ಜಾಗದಲ್ಲಿ ಹೊಸ ಮಾರುಕಟ್ಟೆ ನಿರ್ಮಿಸಲು ಪ್ರಸ್ತಾಪ ಇದೆ ಎಂದು ಕುಪ್ಪೆಪದವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಮಂದೋಲಿಕರ್ ಮಾಹಿತಿ ನೀಡಿದ್ದಾರೆ. ಆದರೆ ಅಲ್ಲಿ ಕಟ್ಟಡ ನಿರ್ಮಿಸುವ ಲಕ್ಷಣ ಇನ್ನೂ ಕಂಡುಬಂದಿಲ್ಲ!

ಜನಸ್ನೇಹಿ ವಾರದ ಸಂತೆ

ವಾರದ ಸಂತೆ ಕೇವಲ ವ್ಯಾಪಾರ-ವಹಿವಾಟಿಗೆ ಸೀಮಿತವಾಗಿಲ್ಲ. ಅಲ್ಲಿ ವಿಭಿನ್ನ ಧರ್ಮ, ಸಮುದಾಯಗಳ ಜನರು ಸೇರುತ್ತಾರೆ. ವ್ಯವಹಾರದ ಜತೆಗೆ ಸಂಬಂಧ-ಸ್ನೇಹ ಪರಿಚಯವೂ ಆಗುತ್ತದೆ. ಇಂತಹ ಸಂತೆ ಪ್ರದೇಶಗಳಲ್ಲಿ ಮಧ್ಯವರ್ತಿಗಳಿಲ್ಲದೆ ತಾವು ಬೆಳೆದ ಹಣ್ಣು- ತರಕಾರಿ ಇತ್ಯಾದಿ ಸೊತ್ತು ಮಾರಾಟ ಮಾಡಲು ಗ್ರಾಮದ ಕೃಷಿಕರಿಗೆ ಅವಕಾಶ ಹೆಚ್ಚು. ಅಂಥದ್ದರಲ್ಲಿ ಈಗ ಕುಪ್ಪೆಪದವಿನಲ್ಲಿ ವಾರದ ಸಂತೆಯೂ ಇಲ್ಲ, ಮಾರುಕಟ್ಟೆಯೂ ಇಲ್ಲ ಎಂಬಂತಾಗಿದೆ.

ಜಿಲ್ಲಾ ಪಂಚಾಯಿತಿಯಿಂದ ಮಾರುಕಟ್ಟೆ ಕಟ್ಟಡಕ್ಕೆ ನಿರ್ಮಾಣಕ್ಕೆ 3 ಲಕ್ಷ ರೂ. ಅನುದಾನವಿತ್ತು. ಕುಪ್ಪೆಪದವು ಗ್ರಾಮ ಪಂಚಾಯಿತಿ ಆಡಳಿತದಿಂದ ಸೂಕ್ತ ಸ್ಪಂದನೆ ಇಲ್ಲದೆ ಅನುದಾನ ವಾಪಸಾಗುವುದರಲ್ಲಿತ್ತು. ಆದರೆ ಶಾಸಕರ ಸಲಹೆ ಮೇರೆಗೆ ಮುಚ್ಚೂರು ಪಂಚಾಯಿತಿಯ ಕೊಂಪದವಿನಲ್ಲಿ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. - ಲಾಯ್ಡ ರೋಡ್ರಿಗಸ್, ಜಿಲ್ಲಾ ಪಂಚಾಯಿತಿ ಇಂಜಿನಿಯರ್ https://www.vijayavani.net/kargil-vijayostava

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net