

ಮಂಗಳೂರು : ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ವತಿಯಿಂದ ಜು. 20ರಿಂದ ಸೆ.12ರವರೆಗೆ ರಾಜ್ಯದಲ್ಲಿ ಜಿಲ್ಲಾವಾರು ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಸದಸ್ಯತ್ವ ಅಭಿಯಾನ ನಡೆಸಲಾಗುವುದು ಎಂದು ಕುಪ್ಮಾ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ಕುಪ್ಮಾ ನಿರಂತರವಾಗಿ ಖಾಸಗಿ ಅನುದಾನರಹಿತ ಕಾಲೇಜುಗಳ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಿದೆ. ಶಿಕ್ಷಣ ವ್ಯವಸ್ಥೆಯಲ್ಲಿ
ಅನೇಕ ಸುಧಾರಣೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನೂ ಹಲವು ಜ್ವಲಂತ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಲು ರಾಜ್ಯವ್ಯಾಪಿ ಕುಪ್ಮಾ ಸಂಸ್ಥೆಯನ್ನು ವಿಸ್ತರಿಸುವ ಮೂಲಕ ಸಂಘಟನೆ ಬಲಗೊಳಿಸಲು ತೀರ್ಮಾನಿಸಿದ್ದೇವೆ ಎಂದರು.
ಸೆ.12,13ರಂದು ರಾಜ್ಯ ಸಮಾವೇಶ:
ಕುಪ್ಮಾ ರಾಜ್ಯ ಕಾರ್ಯದರ್ಶಿ ಪ್ರೊ. ನರೇಂದ್ರ .ಎಲ್.ನಾಯಕ್ ಮಾತನಾಡಿ ಸೆ.12 ಮತ್ತು 13ರಂದು ಕುಪ್ಮಾದ ರಾಜ್ಯ ಮಟ್ಟದ ಸಮಾವೇಶವನ್ನು ದಾವಣಗೆರೆಯಲ್ಲಿ ನಡೆಸಲಾಗುವುದು. ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಈ ಸಮಾವೇಶದ ಉದ್ದೇಶ. ಸಂಘವನ್ನು ರಾಜ್ಯದೆಲ್ಲೆಡೆ ವಿಸ್ತರಿಸುವ ಹಿನ್ನೆಲೆಯಲ್ಲಿ ಜಿಲ್ಲಾವಾರು ಸಂಯೋಜಕರನ್ನು ನೇಮಿಸಲಾಗಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಮೈಸೂರು ಉತ್ತಮವಾಗಿ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಖಾಸಗಿ ಅನುದಾನರಹಿತ ಪಿಯು ಕಾಲೇಜುಗಳಿಗೆ ಪ್ರತಿವರ್ಷ ನೋಂದಣಿ ನವೀಕರಣದ ಬದಲು 10 ವರ್ಷಗಳಿಗೊಮ್ಮೆ ನವೀಕರಣ ಮಾಡುವಂತೆ ಸರ್ಕಾರವನ್ನು ವಿನಂತಿಸಲಾಗಿದೆ. ಪಿಯು ಪರೀಕ್ಷೆ-3 ನಡೆಸುವುದರಿಂದ ಕೆಲವು ಸಮಸ್ಯೆ ಇದೆ. ಪರೀಕ್ಷೆ ಕೈ ಬಿಡುವ ಬಗ್ಗೆ ಚಿಂತನೆ ನಡೆಸಬಹುದಾಗಿದೆ. ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಖಾಸಗಿ ಕಾಲೇಜುಗಳ ಶಿಕ್ಷಕರನ್ನು ಪರಿಗಣಿಸಬೇಕು. ಹೆಚ್ಚುವರಿ ಬ್ಯಾಚ್‌ಗಳಿಗೆ ಅನುಮತಿ ನೀಡುವಾಗ ವಿಳಂಬ ನೀತಿ ಅನುಸರಿಸಬಾರದು .ಈ ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಪ್ರೊ.ನರೇಂದ್ರ .ಎಲ್.ನಾಯಕ್ ತಿಳಿಸಿದರು.
*ಕುಪ್ಮಾ ಕಿರುಹೊತ್ತಗೆ ಬಿಡುಗಡೆ
ಕಳೆದ ಮೂರು ವರ್ಷಗಳಲ್ಲಿ ಕುಪ್ಮಾ ಸಮಿತಿಯಿಂದ ಕೈಗೊಂಡ ಕಾರ್ಯಕ್ರಮಗಳನ್ನು ಕಿರು ಹೊತ್ತಗೆ ಮೂಲಕ ದಾಖಲಿಸಲಾಗಿದ್ದು, ಈ
ಪುಸ್ತಕವನ್ನು ಡಾ.ಎಂ. ಮೋಹನ ಆಳ್ವ ಇದೇ ಸಂದರ್ಭ ಬಿಡುಗಡೆಗೊಳಿಸಿದರು. ಈ ಕಿರು ಹೊತ್ತಗೆಯಲ್ಲಿ ಕುಪ್ಮಾ ಕಾನೂನಾತ್ಮಕವಾಗಿ ಹೇಗೆ ಕಾರ್ಯ ನಿರ್ವಹಿಸಬೇಕೆಂಬ ನಿಯಮಾವಳಿಗಳಿವೆ. ಇದನ್ನು ಪ್ರತಿ ಜಿಲ್ಲೆಯ ಕುಪ್ಮಾದ ಘಟಕಗಳು ಪಾಲಿಸಬೇಕಾಗುತ್ತದೆ. ಈ ನಿಯಮಾವಳಿ ಪ್ರಕಾರ ಜಿಲ್ಲಾವಾರು ಚುನಾವಣೆ ನಡೆಸಿ ಪದಾಧಿಕಾರಿಗಳ ಆಯ್ಕೆ ಹಾಗೂ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೋಹನ್ ಆಳ್ವ ತಿಳಿಸಿದರು.
ಕುಪ್ಮಾ ಗೌರವಾಧ್ಯಕ್ಷ ಡಾ.ಕೆ.ಸಿ. ನಾಕ್, ಕೆ.ರಾಧಾಕೃಷ್ಣ ಶೆಣೈ, ಪದಾಧಿಕಾರಿಗಳಾದ ಸುಧಾಕರ ಶೆಟ್ಟಿ, ಯುವರಾಜ ಜೈನ್, ಮಂಜುನಾಥ ರೇವಣ್ಕರ್ ಉಪಸ್ಥಿತರಿದ್ದರು.