ಜ.5,6 ರಂದು ಮೂಡುಬಿದಿರೆಯಲ್ಲಿ ರಾಜ್ಯಮಟ್ಟದ ಪದವಿಪೂರ್ವ ಶಿಕ್ಷಣ-ಮುಕ್ತ ಸಮಾವೇಶ

mng- dece 25- KUPMA LOGO
ಕುಪ್ಮಾ ಲಾಂಛನ
Published on

ಮಂಗಳೂರು: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ಆಶ್ರಯದಲ್ಲಿ ರಾಜ್ಯಮಟ್ಟದ ಪದವಿಪೂರ್ವ ಶಿಕ್ಷಣ-ಮುಕ್ತ ಸಮಾವೇಶ ಜನವರಿ 5 ಮತ್ತು 6ರಂದು ಮೂಡುಬಿದಿರೆ ವಿದ್ಯಾಗಿರಿ ಆಳ್ವಾಸ್ ಕಾಲೇಜಿನಲ್ಲಿ ನಡೆಯಲಿದೆ.
ಜ.5ರಂದು ಬೆಳಗ್ಗೆ 11.30ರಿಂದ 12.30ರ ತನಕ ನೋಂದಣಿ, ಮಧ್ಯಾಹ್ನ 12.30ರಿಂದ 2 ಗಂಟೆವರೆಗೆ ಊಟ ಮತ್ತು ನೆಟ್‌ವರ್ಕಿಂಗ್, ಮಧ್ಯಾಹ್ನ 2ರಿಂದ 4ವರೆಗೆ ಉದ್ಘಾಟನಾ ಅಧಿವೇಶನ ನಡೆಯಲಿದೆ. ಸಂಜೆ 4ರಿಂದ ಮೊದಲ ಚರ್ಚಾಗೋಷ್ಠಿ (ವಿಷಯ: ಕುಪ್ಮಾದ ಗುರಿ ಮತ್ತು ಉದ್ದೇಶಗಳು), 5.30ರಿಂದ 7.30ರವರೆಗೆ ಸಂವಾದ (ವಿಷಯ: ನಿಮ್ಮ ಜಿಲ್ಲೆಯಲ್ಲಿ ಕುಪ್ಮಾ ಸಂಘಟನೆ ಬಲವರ್ಧನೆ), ಜನವರಿ 6ರಂದು ಬೆಳಗ್ಗೆ 9.30ರಿಂದ 10.30ರವರೆಗೆ ಪ್ಯಾನಲ್ ಚರ್ಚೆ (ವಿಷಯ: ಖಾಸಗಿ ಪದವಿಪೂರ್ವ ಕಾಲೇಜುಗಳ ನಿರ್ವಹಣೆಯ ಸವಾಲುಗಳು), 11ರಿಂದ 12.30ರವರೆಗೆ ಪ್ಯಾನಲ್ ಚರ್ಚೆ (ವಿಷಯ: ರಾಷ್ಟ್ರ ನಿರ್ಮಾಣದಲ್ಲಿ ಖಾಸಗಿ ಪದವಿಪೂರ್ವ ಕಾಲೇಜುಗಳ ಪಾತ್ರ) ನಡೆಯಲಿದೆ. ಜನವರಿ 5ರಂದು ರಾತ್ರಿ 7.45ಕ್ಕೆ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.
ಪದವಿಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇದುವರೆಗೂ ರಾಜ್ಯಮಟ್ಟದಲ್ಲಿ ಆಡಳಿತ ಮಂಡಳಿಗಳ ಒಕ್ಕೂಟ ಅಥವಾ ಸಂಘ ಇಲ್ಲದೆ ಇರುವುದು ವಾಸ್ತವಿಕತೆ ಮತ್ತು ಆತಂಕದ ವಿಷಯವೂ ಹೌದು. ಉತ್ತಮ ಶಿಕ್ಷಣ ನೀಡುವಲ್ಲಿ, ನಿಭಾಯಿಸುವಲ್ಲಿ ಹಲವು ಸಮಸ್ಯೆಗಳು, ಗೊಂದಲಗಳು ಸಹಜವಾಗಿ ಎದುರಾಗುತ್ತವೆ. ಅನೇಕ ಬಾರಿ ಆಯಾ ಶಿಕ್ಷಣ ಸಂಸ್ಥೆಗಳೇ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುತ್ತವೆ. ಆದರೆ ಕೆಲವು ಕ್ಲಿಷ್ಟಕರ ಸಮಸ್ಯೆಗಳನ್ನು ಏಕಾಂಗಿಯಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಒಗ್ಗಟ್ಟಿನಲ್ಲಿ ಬಲವಿದೆಯೆಂಬ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಆಡಳಿತ ಮಂಡಳಿಗಳ ಒಕ್ಕೂಟ ರಚಿಸುವುದು ಅಗತ್ಯ. ಆದ್ದರಿಂದ ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ರಚಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮತ್ತು ಕಾರ್ಯದರ್ಶಿ ಪ್ರೊ.ನರೇಂದ್ರ ಎಲ್.ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net