ಕುಂತಿ ಟೀಚರ್ ಸಾಕ್ಷ್ಯ ಚಿತ್ರ ಲೋಕಾರ್ಪಣೆ

20adarshkdga3
Published on

ಮಡಿಕೇರಿ: ಸತ್ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆಯುಳ್ಳ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಎಂದಿಗೂ ನಿವೃತ್ತಿ ಎಂಬುದಿಲ್ಲ. ಇವರು ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿರುತ್ತಾರೆ ಎಂದು ಹಿರಿಯ ಚಿಂತಕ, ವೈದ್ಯ ಡಾ.ಎಂ.ಜಿ.ಪಾಟ್ಕರ್ ಅಭಿಪ್ರಾಯಪಟ್ಟರು.


ಕೂಡಿಗೆ ಕ್ರೀಡಾಶಾಲೆಯಲ್ಲಿ ೩೬ ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದ ಕುಂತಿಬೋಪಯ್ಯರವರ ಕುರಿತ ಕುಂತಿಬೋಪಯ್ಯ ಸಾಕ್ಷ್ಯಚಿತ್ರ ಕುಂತಿಟೀಚರ್ ಅನ್ನು ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು.


ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಸಂಸ್ಕಾರ ಕಲಿಸಿದ ಶಿಕ್ಷಕರು ನಿವೃತ್ತಿಯಾಗುವುದು ಸೇವಾ ದಾಖಲೆಗೆ ಮಾತ್ರವೇ ಆಗಿದ್ದು ನಿಜವಾದ ಅರ್ಥದಲ್ಲಿ ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿಯೇ ಇರುವ ಶಿಕ್ಷಕರಿಗೆ ನಿವತ್ತಿ ಎಂಬುದೇ ಇಲ್ಲ. ಆ ಪವಿತ್ರ ವೃತ್ತಿಯಲ್ಲಿರುವವರು ಸದಾ ಸಮಾಜದ ಹಿತಚಿಂತನೆ ಮಾಡುತ್ತಿರುತ್ತಾರೆ. ಪ್ರತೀಯೋರ್ವರ ಜೀವನದಲ್ಲಿಯೂ ಓರ್ವ ಆದರ್ಶ ಶಿಕ್ಷಕ ಪ್ರಮುಖ ಪಾತ್ರ ವಹಿಸಿರುತ್ತಾನೆ ಎಂದರು.


ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಕುಂತಿ ಬೋಪಯ್ಯರವರ ಕುರಿತ ಸಾಕ್ಷ್ಯ ಚಿತ್ರ ಸಮಾಜಕ್ಕೆ ಅಗತ್ಯವಾಗಿತ್ತು. ಸಾಧನೆಯ ಬಗ್ಗೆ ಪ್ರಚಾರದಿಂದ ದೂರವಾಗಿ ಎಲೆಮರೆಯ ಹೂವಿನಂತೆ ಕುಂತಿಬೋಪಯ್ಯ ೩೬ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಿಂದ ಸಾಕಷ್ಟು ಅಂತರ ಕಾಯ್ದುಕೊಂಡು ತಾನೋರ್ವ ಸರ್ಕಾರಿ ಸೇವಕಿ ಎಂಬಂತೆ ಕಾರ್ಯನಿರ್ವಹಿಸಿ ಸಾವಿರಾರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಅವರು ಕಾರಣರಾಗಿದ್ದಾರೆ. ಇವರಿಗೆ ರಾಜ್ಯಮಟ್ಟದ ಪ್ರಶಸ್ತಿ ಮಾತ್ರವಲ್ಲ ರಾಷ್ಟ್ರಮಟ್ಟದ ಪ್ರಶಸ್ತಿ ದೊರಕುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.


ಕೂಡಿಗೆ ಕ್ರೀಡಾಶಾಲೆಯಲ್ಲಿ ಶಿಕ್ಷಕಿ, ಪ್ರಾಂಶುಪಾಲೆಯಾಗಿ ನಿವೃತ್ತಿಯಾದ ಕುಂತಿಬೋಪಯ್ಯ ಮಾತನಾಡಿ, ಶಿಕ್ಷಕ ವರ್ಗಕ್ಕೆ ಈ ಮೊದಲು ದೊರಕುತ್ತಿದ್ದ ಗೌರವ ಇಂದಿನ ದಿನಗಳಲ್ಲಿ ದೊರಕುತ್ತಿಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಪ್ರೀತಿ, ವಿಶ್ವಾಸ ಕಡಮೆಯಾಗುತ್ತಲೇ ಇದೆ. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ವಿದ್ಯಾರ್ಥಿಗಳಿಗೆ ಗಣಿತ, ಇಂಗ್ಲೀಷ್ ವಿಷಯಗಳು ಕಷ್ಟ ಎಂಬ ಕಲ್ಪನೆಯಿದೆ. ಆದರೆ ಶಿಕ್ಷಕ ವರ್ಗದವರು ಸರಳ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಆಸಕ್ತಿ ಮೂಡಿಸಬೇಕು ಎಂದು ಸಲಹೆ ನೀಡಿದರು.


ಕುಂತಿಟೀಚರ್ ಸಾಕ್ಷ್ಯ ಚಿತ್ರ ನಿರ್ದೇಶಕ ಪತ್ರಕರ್ತ ಎಚ್.ಟಿ.ಅನಿಲ್ ಮಾತನಾಡಿ, ೩೬ ವರ್ಷಗಳ ಕಾಲ ಕ್ರೀಡಾಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಶಾಲೆಯ ಏಳಿಗೆಗೆ ಶ್ರಮಿಸಿದ ಕುಂತಿರವರ ಸಾಧನೆ ಜತೆಗೇ ರಾಜ್ಯದ ಸುಸಜ್ಜಿತ ಕ್ರೀಡಾಶಾಲೆಯ ಬಗ್ಗೆ ಸಾಕ್ಷ್ಯ ಚಿತ್ರದಲ್ಲಿ ಮಾಹಿತಿ ನೀಡಲಾಗಿದೆ. ಕೊಡಗಿಗೆ ಕೂಡಿಗೆ ಕ್ರೀಡಾಶಾಲೆ ಖಂಡಿತವಾಗಿಯೂ ಪ್ರತಿಷ್ಟೆಯ ಶಾಲೆಯಾಗಿದೆ. ಹೀಗಾಗಿ ಸಾಕ್ಷ್ಯ ಚಿತ್ರದಲ್ಲಿ ಕೂಡಿಗೆ ಕ್ರೀಡಾಶಾಲೆಯ ಬೆಳವಣಿಗೆಯನ್ನೂ ದಾಖಲಿಸಲಾಗಿದೆ ಎಂದರು.


ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ, ವಿರಾಜಪೇಟೆಯ ಸಮಾಜಸೇವಕಿ ಕಾಂತಿ ಸತೀಶ್, ಕೂಡಿಗೆ ಕ್ರೀಡಾಶಾಲೆಯ ಪ್ರಾಂಶುಪಾಲ ದೇವಕುಮಾರ್, ಕ್ರೀಡಾಇಲಾಖೆಯ ತರಬೇತುದಾರ ಅಂತೋಣಿ ಡಿಸೋಜಾ ಮಾತನಾಡಿದರು.


ಈ ಸಂದರ್ಭದಲ್ಲಿ ಸಾಕ್ಷ್ಯ ಚಿತ್ರ ನಿರ್ಮಿಸಿ, ನಿರ್ದೇಶಿಸಿದ ಹಿರಿಯ ಪತ್ರಕರ್ತ ಎಚ್.ಟಿ.ಅನಿಲ್ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಉಪನ್ಯಾಸಕಿಯರಾದ ಕೆ.ಜಯಲಕ್ಷ್ಮಿ, ಅಶ್ವಿನಿ ಕಿರಣ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net