

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಭಗವಂತನ ಸೇವೆಯಿಂದ ಅಂತಃಕರಣ ಶುದ್ಧವಾಗುತ್ತದೆ. ಅಂತಃಕರಣ ಶುದ್ಧವಾದರೆ ಬಾಹ್ಯವೂ ಶುದ್ಧವಾಗಿ ಅಂತರ್ವಾಣಿಯ ದರ್ಶನವಾಗುತ್ತದೆ. ಇದೊಂದು ಸ್ಪರ್ಧೆಯಾದರೂ ದೇವರ ಸಂಕೀರ್ತನೆ ಆಗಿರುವುದರಿಂದ ಸೋಲಿಲ್ಲದ ಸ್ಪರ್ಧೆ ಎಂದು ಉಪ್ಪಳ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ವತಿಯಿಂದ ದ್ವಿತೀಯ ಬಾರಿಗೆ ದ.ಕ, ಉಡುಪಿ, ಕಾಸರಗೋಡು ಜಿಲ್ಲಾಮಟ್ಟದ 18 ವರ್ಷ ವಯೋಮಾನದೊಳಗಿನ ಕುಣಿತ ಭಜನಾ ಸ್ಪರ್ಧೆ ‘ಸುಗಿತ್ ನಲಿಪುಗ ಎಸಲ್ 2’ ತೊಕ್ಕೊಟ್ಟಿನ ಗಟ್ಟಿ ಸಮಾಜ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಜ್ಯೋತಿಷಿ ಗೋಪಾಲಕೃಷ್ಣ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದೇಶಿಯರೂ ಭಾರತೀಯ ಸಂಸ್ಕೃತಿಗೆ ಮಾರುಹೋಗಿ ಇಂದಿನ ಹೆಣ್ಮಕ್ಕಳನ್ನು ವಿವಾಹವಾಗುತ್ತಿದ್ದು ಭಜನೆ ಹಾಡುತ್ತಿದ್ದಾರೆ. ಆದರೆ ನಮ್ಮವರು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಮದುವೆ ಕಾರ್ಯಕ್ರಮ ವಿರೂಪಗೊಳಿಸುತ್ತಿದ್ದಾರೆಂದು ಖೇದ ವ್ಯಕ್ತಪಡಿಸಿದರು.
100 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು. ಉಳ್ಳಾಲ ಶ್ರೀ ಚೀರುಂಭ ಭಗವತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಸಾಯಿ ಪರಿವಾರ್ ಟ್ರಸ್ಟ್ ಗೌರವಾಧ್ಯಕ್ಷ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನಮನೆ, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಚಂದ್ರಹಾಸ ಪಂಡಿತ್ಹೌಸ್, ಚಿತ್ರ ನಿರ್ಮಾಪಕ ಲಂಚುಲಾಲ್, ಉದ್ಯಮಿಗಳಾದ ಪ್ರಕಾಶ್, ದಿವಾಕರ್ ಶೆಟ್ಟಿ ಕಾಪು, ಟ್ರಸ್ಟಿಗಳಾದ ಪ್ರವೀಣ್ ಎಸ್.ಕುಂಪಲ, ಪುರುಷೋತ್ತಮ ಕಲ್ಲಾಪು, ಗಣೇಶ್ ಅಂಚನ್, ಜಿತೇಶ್ ಮೊದಲಾದವರು ಉಪಸ್ಥಿತರಿದ್ದರು.
ಡಾ.ಅರುಣ್ ಉಳ್ಳಾಲ್ ಸ್ವಾಗತಿಸಿದರು. ಕೃಷ್ಣ ಪೊನ್ನೆತ್ತೋಡು ವಂದಿಸಿದರು. ಟ್ರಸ್ಟಿ ಪ್ರವೀಣ್ ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.
ಭಕ್ತಿ ಇಲ್ಲದ ಜೀವನ ವ್ಯರ್ಥ. ಸಂಸ್ಕೃತಿ, ಸಂಸ್ಕಾರ, ವ್ಯಕ್ತಿತ್ವಕ್ಕೆ ಭಕ್ತಿ ನೀಡಲು ಭಗವಂತನ ಸೇವೆ ಅಗತ್ಯ. ಸುಗಿತ್ ನಲಿಪುಗ ಹೆಸರಲ್ಲಿ ಸಾಯಿ ಪರಿವಾರ್ ಟ್ರಸ್ಟ್ ಅಯೋಜಿಸುತ್ತಿರುವ ಭಜನಾ ಸ್ಪರ್ಧೆ ಪೂರಕ. ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉಪ್ಪಳ ಕೊಂಡೆವೂರು ಮಠ