ಪೊಲೀಸ್ ಕಾವಲಿನಲ್ಲಿ ಕುಣಿಮೆಳ್ಳಿಹಳ್ಳಿ ಗ್ರಾಪಂ ಕಟ್ಟಡ ಉದ್ಘಾಟನೆ!

Kunimellihalli grama panchayati
Published on

ಸವಣೂರ: ಸದಸ್ಯರ ವಿರೋಧದ ನಡುವೆಯೂ ಗ್ರಾಮ ಪಂಚಾಯಿತಿ ಕಚೇರಿಯ ನೂತನ ಕಟ್ಟಡ ಉದ್ಘಾಟನೆಯನ್ನು ಪೊಲೀಸರ ಸರ್ಪಗಾವಲಿನಲ್ಲಿ ನೇರವೇರಿಸಿದ ಘಟನೆ ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಸದಸ್ಯರ ಮನವೊಲಿಸಲು ಮುಂದಾಗದ ಶಾಸಕ ಯಾಸೀರ್​ಅಹ್ಮದಖಾನ್ ಪಠಾಣ ಧೋರಣೆ ತೀವ್ರ ಟೀಕೆಗೆ ಗುರಿಯಾಯಿತು.

ಗ್ರಾಪಂ ಅಧ್ಯಕ್ಷ ಸುರೇಶ ಸೂರದ ವಿರುದ್ಧ ಅವಿಶ್ವಾಸ ಗೊತ್ತುವಳಿಗಾಗಿ ಸದಸ್ಯರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಅವಿಶ್ವಾಸ ಗೊತ್ತುವಳಿ ದಿನಾಂಕ ನಿಗದಿ ಮೊದಲೇ ಅಧ್ಯಕ್ಷ ಸೂರದ, ಗ್ರಾಪಂ ನೂತನ ಕಟ್ಟಡ ಉದ್ಘಾಟನೆಗೆ ಮುಂದಾಗಿದ್ದು ಅವಾಂತರಕ್ಕೆ ಕಾರಣವಾಯಿತು.

ಶಾಸಕರು ಸೇರಿದಂತೆ ಅಧಿಕಾರಿಗಳು ಸಮಾರಂಭವನ್ನು ರದ್ದುಗೊಳಿಸಲು ಸೂಚಿಸಿದ್ದರು. ಆದರೆ, ಫೆ. 1ರಂದು ಸಮಾರಂಭ ಆಯೋಜನೆಗೆ ಜ. 31ರಂದು ರಾತ್ರಿ ಪೂರ್ವ ಸಿದ್ಧತೆ ಕೈಗೊಳ್ಳುವುದನ್ನು ಕಂಡ 7 ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಆದರೆ, ಅಧ್ಯಕ್ಷ ಸುರೇಶ ಸೂರದ ಹಾಗೂ ಇತರ ಸದಸ್ಯರು ಶಾಸಕರಿಗೆ ಆಹ್ವಾನ ನೀಡಿದ್ದಾರೆ. ಗ್ರಾಪಂ ಸದಸ್ಯರ ವಿರೋಧವಿದ್ದರೂ ಶಾಸಕ ಯಾಸೀರ್​ಅಹ್ಮದಖಾನ್ ಪಠಾಣ ಪೊಲೀಸ್ ಸರ್ಪಗಾವಲಿನಲ್ಲಿ ಆಗಮಿಸಿ ಗ್ರಾಪಂ ನೂತನ ಕಟ್ಟಡ ಉದ್ಘಾಟಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು.

ಉಪಾಧ್ಯಕ್ಷೆ ನಿರ್ಮಲಾ ಭಜಂತ್ರಿ, ನಿಂಗಪ್ಪ ಚಿಗಳ್ಳಿ, ರಾಜು ಕಡ್ಡಿಯವರ, ಯಲ್ಲಪ್ಪ ಗುಡ್ಡಪ್ಪನವರ, ಗೀತಾ ಗಾಳಿಗೌಡ್ರ, ಹೂವಕ್ಕ ಪಲ್ಲೇದ, ಇತರರು ಪಾಲ್ಗೊಂಡಿದ್ದರು.

ಡಿವೈಎಸ್​ಪಿ ಕೆ.ವಿ. ಗುರುಶಾಂತಪ್ಪ, ಪಿಐ ಆನಂದ ಒನಕುದ್ರೆ, ಸುರೇಶ ಕುಂಬಾರ, ಪಿಎಸ್​ಐ ಮೇಘರಾಜ ದೊಡ್ಡಮನಿ, ಪರಶುರಾಮ ಕಟ್ಟಿಮನಿ ಹಾಗೂ ವಿವಿಧ ಅಧಿಕಾರಿಗಳು ಸರ್ಪಗಾವಲು ಏರ್ಪಡಿಸಿದ್ದು ಗ್ರಾಮಸ್ಥರಲ್ಲಿ ಮತ್ತಷ್ಟು ಆಕ್ರೋಶ ತರಿಸಿತು.

ವಿರೋಧ ವ್ಯಕ್ತಪಡಿಸಿದ್ದ 7 ಸದಸ್ಯರನ್ನು ಗ್ರಾಪಂ ಹಳೆಯ ಕಟ್ಟಡದಲ್ಲಿ ಕೂಡಿ ಹಾಕಲಾಗಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ, ಸದಸ್ಯರು ಸಮಾರಂಭಕ್ಕೆ ತೆರಳದಂತೆ ನೋಡಿಕೊಂಡರು. ಶಾಸಕರು ಸದಸ್ಯರ ಮನವೊಲಿಸಿ ಸಮಾರಂಭಕ್ಕೆ ಆಹ್ವಾನಿಸುತ್ತಾರೆ ಎನ್ನುವ ನಂಬಿಕೆ ಹುಸಿಯಾಯಿತು. ಅಭಿವೃದ್ಧಿ ಕುರಿತು ಮಾತನಾಡುವ ಶಾಸಕ ಪಠಾಣ ಅವರಿಗೆ ಸದಸ್ಯರ ಮನವೊಲಿಸಲು ಸಾಧ್ಯವಾಗಲಿಲ್ಲ. ಈ ಕುರಿತು ನಾವು ಕಾನೂನು ಹೋರಾಟ ಮಾಡುತ್ತೇವೆ. ಸದಸ್ಯರನ್ನು ಬಿಟ್ಟು ಕೇವಲ ತಮ್ಮ ಸ್ವಾರ್ಥಕ್ಕೆ ನೂತನ ಕಟ್ಟಡ ಉದ್ಘಾಟನೆ ಮಾಡಿದ್ದಾರೆ. ಸ್ಥಳೀಯರು ಅವರನ್ನು ಕ್ಷಮಿಸುವುದಿಲ್ಲ. | ಸಂಗನಗೌಡ ಹೊಂಬರಡಿ, ವಿರೋಧ ವ್ಯಕ್ತ ಪಡಿಸಿದ ಸದಸ್ಯ ಗ್ರಾಪಂ ಅಧ್ಯಕ್ಷರು ಹಾಗೂ ಗ್ರಾಮಸ್ಥರ ಆಹ್ವಾನದ ಮೇರೆಗೆ ಸಮಾರಂಭಕ್ಕೆ ಆಗಮಿಸಿದ್ದೇನೆ. ಇಲ್ಲಿರುವ ಗೊಂದಲ ಕುರಿತು ನನಗೆ ಮಾಹಿತಿ ಇರಲಿಲ್ಲ. ಮುಂದಿನ ದಿನಮಾನದಲ್ಲಿ ಸರಿ ಪಡಿಸಿಕೊಳ್ಳಲಾಗುವುದು. | ಯಾಸೀರ್​ಅಹ್ಮದ್​ಖಾನ್ ಪಠಾಣ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net