ಇಂಜಿನಿಯರ್ ಮೇಲೆ ಹಲ್ಲೆಗೆ ಯತ್ನ !: ಪುರಸಭೆ ಸಾಮಾನ್ಯ ಸಭೆಯಲ್ಲಿ ಕೋಲಾಹಲ ; ಮೂಕಪ್ರೇಕ್ಷಕರಾದ ಅಧ್ಯಕ್ಷ, ಸದಸ್ಯರು

20 kunigal 1
???????????????????????????????????????????????????????????????????????????????????????????????????????????????????????????????
Published on

ಕುಣಿಗಲ್: ಪೆಟ್ಟಿ ಅಂಗಡಿಗಳನ್ನು ತೆರವುಗೊಳಿಸುವ ಸಂಬಂಧ ಮಾತಿಗೆ ಮಾತು ಬೆಳೆದು ಪುರಸಭೆ ಸದಸ್ಯೆ ಜಯಲಕ್ಷ್ಮಿ, ಪರಿಸರ ಇಂಜಿನಿಯರ್ ಚಂದ್ರಶೇಖರ್ ಅವರನ್ನು ಏಕವಚನದಲ್ಲಿ ನಿಂದಿಸಿದ್ದಲ್ಲದೆ ನೀರಿನ ಬಾಟಲ್‌ನಿಂದ ಹಲ್ಲೆಗೆ ಯತ್ನಿಸಿದ ಘಟನೆಗೆ ಸಾಮಾನ್ಯ ಸಭೆ ಸಾಕ್ಷಿಯಾಯಿತು.

ಪುರಸಭೆಯಲ್ಲಿ ಎಸ್.ಕೆ.ನಾಗೇಂದ್ರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಕೆ.ಆರ್.ಜಯಲಕ್ಷ್ಮೀ, ಪಟ್ಟಣದ ಕಾಂಗ್ರೆಸ್ ಕಚೇರಿ ಹಾಗೂ ಕೃಷಿ ಇಲಾಖೆ ಕಚೇರಿ ಎದುರು ಕೆಲವರು ಅಕ್ರಮವಾಗಿ ಪೆಟ್ಟಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ, ಇದರಿಂದಾಗಿ ವಾಹನ, ಜನ ಸಂಚಾರಕ್ಕೆ ತೊಂದರೆಯಾಗಿರುವುದಲ್ಲದೆ ಅಪಘಾತಗಳು ಸಂಭವಿಸುತ್ತಿವೆ, ಪೆಟ್ಟಿ ಅಂಗಡಿಗಳನ್ನು ತೆರವುಗೊಳಿಸುವಂತೆ ವಿಶೇಷ ಸಭೆಯಲ್ಲಿ ಸೂಚಿಸಲಾಗಿದ್ದು, ಈ ನಿಟ್ಟಿನಲ್ಲಿ ಯಾವ ಕ್ರಮಕೈಗೊಂಡಿದ್ದೀರಿ? ಎಂದು ಚಂದ್ರಶೇಖರ್ ಅವರನ್ನು ಏರುಧ್ವನಿಯಲ್ಲಿ ಪ್ರಶ್ನಿಸಿದರು.

ಅಂಗಡಿಗಳಿಗೆ ಅಳವಡಿಸಿರುವ ವಿದ್ಯುತ್ ಸಂಪರ್ಕ ಕಡಿತಕ್ಕೆ ಬೆಸ್ಕಾಂಗೆ ಮನವಿ ಸಲ್ಲಿಸಲಾಗಿದೆ, ಆದಾದ ಬಳಿಕ ತೆರವುಗೊಳಿಸುವುದಾಗಿ ಚಂದ್ರಶೇಖರ್ ಉತ್ತರಿಸಿದರು. ಇಷ್ಟಕ್ಕೆ ಸಮಾಧಾನವಾಗದ ಜಯಲಕ್ಷ್ಮಿ, 3-4 ದಿನಗಳೊಳಗೆ ತೆರವುಗೊಳಿಸುವುದಾಗಿ ತಿಳಿಸಿ ಈಗ ಸಬೂಬು ಹೇಳ್ತೀರಾ?, ಅಂಗಡಿ ಮಾಲೀಕರಿಂದ ನಾನು ಹಣ ಪಡೆದಿದ್ದೇನೆಂದು ಹೇಳ್ತಿದ್ದಾರೆ, ಇವರಿಂದಾಗಿ ನಾನು ತಲೆ ಎತ್ತೋಕೆ ಆಗ್ತಿಲ್ಲ ಎಂದು ಸಿಡಿಮಿಡಿಗೊಂಡು, ಟೇಬಲ್ ಮೇಲಿದ್ದ ನೀರಿನ ಬಾಟಲ್ ಹಾಗೂ ಖುರ್ಚಿಯಿಂದ ಚಂದ್ರಶೇಖರ್ ಮೇಲೆ ಹಲ್ಲೆಗೆ ಮುಂದಾದರು. ಪಕ್ಕದಲ್ಲೇ ಕುಳಿತಿದ್ದ ಪುರಸಭೆ ಸಿಬ್ಬಂದಿ ರೂಪಾ ತಡೆದರು.

ಆರೋಪ-ಪತ್ಯಾರೋಪಗಳು, ಸದಸ್ಯೆ ಅಧಿಕಾರಿ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದರೂ ಅಧ್ಯಕ್ಷರಾದಿಯಾಗಿ ಇಡೀ ಸಭೆ ಹಾಗೂ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು!

ಮುಂದಿನ ಮಂಗಳವಾರ ಪೆಟ್ಟಿ ಅಂಗಡಿಗಳನ್ನು ತೆರವುಗೊಳಿಸಲಾಗುವುದು. ಆದರೆ ಸದಸ್ಯರು ಕರೆ ಮಾಡಿ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಬಾರದೆಂದು ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್ ತಿಳಿಸಿದರು.

ಅಭಿವೃದ್ಧಿ ಶುಲ್ಕದಲ್ಲಿ ಅವ್ಯವಹಾರ? : ಬಿದನಗೆರೆ ಸರ್ವೇ ನಂ.54/1, 54/3 ನಂಬರ್‌ನ ಜಾಗಕ್ಕೆ ಅಭಿವೃದ್ಧಿ ಶುಲ್ಕ ಎಂದು 4.7 ಲಕ್ಷ ರೂ. ಕಟ್ಟಿಸಿಕೊಂಡಿದ್ದಾರೆ, ಇದು ಕಾನೂನು ಉಲ್ಲಂಘನೆಯಾಗಿದೆ. ಬಡವರಿಗೆ ಒಂದು ನ್ಯಾಯ, ಬಲಾಢ್ಯರಿಗೆ ಒಂದು ನ್ಯಾಯ ಆಗಬಾರದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೆ.ಎಸ್.ಕೃಷ್ಣ, ಅವ್ಯಹಾರದಲ್ಲಿ ಅಧ್ಯಕ್ಷರು, ಮುಖ್ಯಾಧಿಕಾರಿ ಶಾಮೀಲಾಗಿದ್ದಾರೆ ಎಂಬ ದೂರು ಕೇಳಿ ಬರುತ್ತಿವೆ ಎಂದರು, ಇದಕ್ಕೆ ರಂಗಸ್ವಾಮಿ ಧ್ವನಿಗೂಡಿಸಿದರು. ಆರೋಪದಿಂದ ಕೆರಳಿದ ಅಧ್ಯಕ್ಷ ಎಸ್.ಕೆ.ನಾಗೇಂದ್ರ, ನನ್ನ ಅಧಿಕಾರ ಅವಧಿಯಲ್ಲಿ ಯಾವೊಬ್ಬ ವ್ಯಕ್ತಿಯಿಂದ ನಯಾ ಪೈಸೆ ಪಡೆದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಿದ್ದಂತೆ ಸಭೆ ಗದ್ದಲದ ಗೂಡಾಯಿತು. ಮಧ್ಯಪ್ರವೇಶಿಸಿದ ಸಿಒ ರವಿಕುಮಾರ್, ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ವಿನಾ ಕಾರಣ ಗೊಂದಲ ಸೃಷ್ಠಿಸುವುದು ಬೇಡ, ಕರಡು ತಿದ್ದುಪಡಿ ಆಗುವವರೆಗೆ ಕ್ರಮಕೈಗೊಳ್ಳುವುದಿಲ್ಲ ಎನ್ನುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.

ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಮೀಉಲ್ಲಾ, ಸದಸ್ಯರಾದ ಅರುಣ್‌ಕುಮಾರ್, ರಾಮು, ನಾಗರಾಜು, ದೇವರಾಜು ಇತರರು ಇದ್ದರು.

ಶಿಸ್ತು ಕ್ರಮಕ್ಕೆ ಶಿಫಾರಸು: ಕೆಲ ವ್ಯಕ್ತಿಗಳ ಖಾತೆಗಳಿಗೆ ಅನಧಿಕೃತವಾಗಿ ಪಿಐಡಿ ನಂಬರ್ ನೀಡಲಾಗಿದೆ, ಆದರೆ ಬಡವರು ಇ-ಖಾತೆ ಮಾಡಿಸಿಕೊಳ್ಳಲು ಪಿಐಡಿ ನಂಬರ್ ನೀಡುತ್ತಿಲ್ಲ ಎಂದು ಸದಸ್ಯರಾದ ಉದಯ್, ಶ್ರೀನಿವಾಸ್, ಶ್ರೀನಿವಾಸಮೂರ್ತಿ ಆರ್‌ಒ ಜಗರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ಇದು ನನ್ನಿಂದ ಆಗಿಲ್ಲ ಎಂದು ಆರ್‌ಒ ಸಮಜಾಯಿಷಿ ನೀಡುತ್ತಿದ್ದಂತೆ ಕೆಲ ಸದಸ್ಯರು ಇಂಜಿನಿಯರ್ ಅರುಣ್‌ಕುಮಾರ್ ಪಿಐಡಿ ನಂಬರ್ ನೀಡಿದ್ದಾರೆ ಎಂದು ಆರೋಪಿಸಿ ಶಿಸ್ತು ಕ್ರಮಕ್ಕೆ ಆಗ್ರಹಿಸಿದರು.

ಬದಲಾವಣೆಗೆ ಪಟ್ಟು: ಪುರಸಭೆ ಕಾನೂನು ಸಲಹೆಗಾರ ಶಿವಶಂಕರ್ ಅವರಿಗೆ ವರ್ಷದಲ್ಲಿ 6 ಲಕ್ಷ ರೂ. ಭತ್ಯೆ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೃಷ್ಣ, ಈವರೆಗೂ ಅವರಿಗೆ ಎಷ್ಟು ಪ್ರಕರಣ ವಹಿಸಲಾಗಿದೆ? ಎಷ್ಟು ಪ್ರಕರಣಗಳು ತೀರ್ಮಾನವಾಗಿವೆ? ಎಂದು ಪ್ರಶ್ನಿಸಿದರು. ಈ ಹಿಂದೆ ಕಾನೂನು ಸಲಹೆಗಾರರಿಗೆ 25 ರಿಂದ 30 ಸಾವಿರ ರೂ. ನೀಡಲಾಗುತ್ತಿದೆ, ಆದರೆ ಈಗಿನ ಕಾನೂನು ಸಲಹೆಗಾರರಿಗೆ 6 ಲಕ್ಷ ರೂ. ಏಕೆ ಕೊಟ್ಟಿದ್ದೀರ? ಕೂಡಲೇ ಅವರನ್ನು ಬದಲಾಯಿಸಿ ಟೆಂಡರ್ ಮೂಲಕ ಸಲಹೆಗಾರರನ್ನು ನೇಮಕ ಮಾಡಬೇಕೆಂದು ಪಟ್ಟುಹಿಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net