ಜಿಲ್ಲಾಧಿಕಾರಿಯಿಂದ ಕುಣಿಗಲ್​ ರೌಂಡ್ಸ್​

2
ಕುಣಿಗಲ್​ ಪುರಸಭೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಭೇಟಿ ನೀಡಿ ಆಡಳಿತದ ಕಾರ್ಯವೈಖರಿಯನ್ನು ಪರಿಶೀಲಿಸಿದರು. ತಹಸೀಲ್ದಾರ್​ ಯು.ರಶ್ಮಿ, ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್​ ಇದ್ದರು.
Published on

ತಾಲೂಕಿನ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಡಿಸಿ ಶುಭಕಲ್ಯಾಣ್​ ಪರಿಶೀಲನೆ |ಅಧಿಕಾರಿಗಳಿಗೆ ಕ್ಲಾಸ್​

ವಿಜಯವಾಣಿ ಸುದ್ದಿಜಾಲ ಕುಣಿಗಲ್​
ತಾಲೂಕಿನ ಆಸ್ಪತ್ರೆ, ವಸತಿಶಾಲೆ ಸೇರಿ ವಿವಿಧ ಇಲಾಖೆಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮಂಗಳವಾರ ದಿಢೀರ್​ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಿದರು.


ಬೆಳಗ್ಗೆ ತುಮಕೂರಿನಿಂದ ಕುಣಿಗಲ್​ಗೆ ಬರುವ ಮಾರ್ಗ ಮಧ್ಯೆ ಭಕ್ತರಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆಯಲ್ಲಿ ಯಾವೊಬ್ಬ ವೈದರು ಹಾಗೂ ಸಿಬ್ಬಂದಿ ಇಲ್ಲದನ್ನು ಕಂಡು ಅಸಮಧಾನಗೊಂಡ ಜಿಲ್ಲಾಧಿಕಾರಿ, ಟಿಎಚ್​ಒ ಹಾಗೂ ಡಿಎಚ್​ಒ ಅವರಿಗೆ ಕರೆ ಮಾಡಿ ಸಮಯಕ್ಕೆ ಸರಿಯಾಗಿ ವೈದ್ಯರು ಆಸ್ಪತ್ರೆಯಲ್ಲಿ ಇಲ್ಲವಾದರೆ ಸಾಮಾನ್ಯಜನರ ಪಾಡೇನೂ? ಎಂದು ಪ್ರಶ್ನಿಸಿದ ಅವರು, ಗೈರಾಗಿರುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.


ನಿಮ್ಮ ಮಕ್ಕಳಂತೆ ಇಂಜಿನಿಯರ್​ ಆಗಬಾರದೇ?: ಪಟ್ಟಣದ ಮಹಾತ್ಮ ಗಾಂಧಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಶುಭಕಲ್ಯಾಣ್​, 10ನೇ ತರಗತಿ ಕೊಠಡಿಗೆ ತೆರಳಿ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಪರಿಶೀಲಿಸಿ, ವಿದ್ಯಾರ್ಥಿಗಳಿಂದ ಪಾಠ ಓದಿಸಿದರು. ಈ ವೇಳೆ ಕೆಲ ವಿದ್ಯಾರ್ಥಿಗಳು ಓದಲು ಬಾರದನ್ನು ಕಂಡ ಜಿಲ್ಲಾಧಿಕಾರಿ, ಕೋಪಗೊಂಡು ನಿಮ್ಮ ಮಕ್ಕಳು ಏನು ಓದುತ್ತಿದ್ದಾರೆ ಎಂದು ಮುಖ್ಯಶಿಕ್ಷಕರಿಗೆ ಪ್ರಶ್ನಿಸಿದರು. ಇದಕ್ಕೆ ಮುಖ್ಯಶಿಕ್ಷಕಿ ಇಂಜಿನಿಯರಿಂಗ್​ ವ್ಯಾಸಂಗ ಮಾಡುತ್ತಿದ್ದಾರೆ ಎಂದಾಗ ಈ ಮಕ್ಕಳು ನಿಮ್ಮ ಮಕ್ಕಳಂತೆ ಇಂಜಿನಿಯರ್​ ಆಗಬಾರದೇ? ಎಂದು ಪ್ರಶ್ನೆ ಮಾಡಿ ಮಕ್ಕಳ ಬಗ್ಗೆ ಕಾಳಜಿ ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಹರಿಸುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ತಹಸೀಲ್ದಾರ್​ ಯು.ರಶ್ಮಿ, ತಾಲೂಕು ವೈದ್ಯಾಧಿಕಾರಿ ಡಾ.ಮರಿಯಪ್ಪ, ಆಡಳಿತ ವೈದ್ಯಾಧಿಕಾರಿ ಡಾ.ಗಣೆಶ್​ ಬಾಬು, ಡಾ.ನವೀನ್​, ಡಾ.ಚಂದ್ರು, ಬಿಇಒ ಬೋರೇಗೌಡ ಇದ್ದರು.

ಆರ್​ಐ ಅಮಾನತಿಗೆ ಶಿಫಾರಸು: ಕುಣಿಗಲ್​ ಪುರಸಭೆಗೆ ಆಗಮಿಸಿದ ಡಿಸಿ, ಕಂದಾಯ ವಸೂಲಾತಿ ಪರಿಶೀಲಿಸಿದರು. ಜಿಲ್ಲೆಯಲ್ಲಿಯೇ ಕುಣಿಗಲ್​ ಪುರಸಭೆಯು ವಿವಿಧ ಕರ ವಸೂಲಿಯಲ್ಲಿ ಹಿಂದೆ ಉಳಿದಿದೆ. ಕಂದಾಯ ಸಂಗ್ರಹಣೆ ಮಾಡಲು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಏಕೆ?. ಕಂದಾಯ ನಿರೀಕ್ಷಕ ಮುನಿಯಪ್ಪ ಅವರನ್ನು ಅಮಾನತು ಮಾಡಲು ಡಿಎಂಎಗೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸೊಳ್ಳೆ, ಜಿರಳೆ ಸ್ವಾಗತ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಶುಭಕಲ್ಯಾಣ್​ಗೆ ಸೊಳ್ಳೆ ಜಿರಳೆಗಳು ಸ್ವಾಗತಿಸಿದವು. ಡ್ರೆಸ್ಸಿಂಗ್​ ರೂಮ್​ಗೆ ತೆರಳಿ ಹಾವು ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯನ್ನು ಮಾತನಾಡಿಸಿದರು. ಈ ವೇಳೆ ರೋಗಿಗೆ ಸೊಳ್ಳೆ ಕಚ್ಚುತ್ತಿರುವುದನ್ನು ಕಂಡು ಡೆಂಘೆ ಉಲ್ಬಣವಾಗುತ್ತಿರುವ ಈ ಸಮಯದಲ್ಲಿ ಏನ್ರೀ ಇದು! ಸೊಳ್ಳೆ ನಿಯಂತ್ರಣಕ್ಕೆ ಾಗಿಂಗ್​ ಮಾಡಿಸಿಲ್ಲವೇ. ತಕ್ಷಣ ಾಗಿಂಗ್​ ಮಾಡಿಸುವಂತೆ ಸೂಚಿಸಿದರು. ಹೆರಿಗೆ ಹಾಗೂ ಜನರಲ್​ ವಾರ್ಡ್​ಗೇ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿ, ಹೆರಿಗೆ ಶಸ್ತ್ರಚಿಕಿತ್ಸಾ ಕೊಠಡಿಯಿಂದ ಹೊರ ಬರುವಾಗ ಜಿರಲೆ ಕಂಡು ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಿದರು.

ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಜಿಲ್ಲಾ ಕೆಡಿಪಿ ಸಭೆಯಲ್ಲಿ ಕುಣಿಗಲ್​ ತಾಲೂಕಿನ ಸಾಕಷ್ಟು ಸಮಸ್ಯೆಗಳ ಬಗ್ಗೆ ಚರ್ಚೆಯಾದ ಹಿನ್ನೆಲೆಯಲ್ಲಿ ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಲು ಕ್ರಮಕೈಗೊಳ್ಳಲಾಗಿದೆ. ತಾಲೂಕಿನ ಶಾಲೆ, ವಸತಿಶಾಲೆ, ಹಾಸ್ಟೆಲ್​ ಸೇರಿ ವಿವಿಧ ಇಲಾಖೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸಂಬಂದಪಟ್ಟವರಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.| ಶುಭಕಲ್ಯಾಣ್​ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net