ವಿಜಯವಾಣಿ ಸುದ್ದಿಜಾಲ ಕುಣಿಗಲ್
ಕುಣಿಗಲ್ ಪುರಸಭೆಯಲ್ಲಿ 2022&23ನೇ ಸಾಲಿನಲ್ಲಿ ಕಂದಾಯ, ತಾಂತ್ರಿಕ, ಆರೋಗ್ಯ ಮತ್ತು ಲೆಕ್ಕ ಶಾಖೆಗಳಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣ ಸಂಬಂಧ ತನಿಖಾಧಿಕಾರಿಗಳು ನೀಡಿದ ವರದಿ ಮೇರೆಗೆ ಕುಣಿಗಲ್ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅವರನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅವರ ಮೇಲಿನ ದೂರಿನ ಉಲ್ಲೇಖ (1) ಮತ್ತು ಎರಡರಂತೆ ತನಿಖಾ ತಂಡವು ಕುಣಿಗಲ್ ಪುರಸಭೆಯಲ್ಲಿ 2022&23ನೇ ಸಾಲಿನಿಂದ ಕಂದಾಯ, ತಾಂತ್ರಿಕ, ಆರೋಗ್ಯ ಮತ್ತು ಲೆಕ್ಕ ಶಾಖೆಗಳಿಗೆ ಸಂಬಂಧಿಸಿದಂತೆ ಸಮಗ್ರವಾದ ತನಿಖೆ ನಡೆಸಿ ಸಲ್ಲಿಸಿರುವ ತನಿಖಾ ವರದಿಯಲ್ಲಿ ಗಂಭೀರ ಸ್ವರೂಪದ ಲೋಪದೋಷಗಳು ಕಂಡು ಬಂದಿರುತ್ತದೆ ಎಂದು ನಿರ್ದೇಶಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಿರ್ದೇಶಕರ ಪತ್ರದಲ್ಲಿ ಏನಿದೆ?
ಸಾಮಾನ್ಯ ನಿಧಿಯಡಿಯಲ್ಲಿ ಕೊಟೇಷನ್ ಮುಖಾಂತರ ತುಂಡು ಗುತ್ತಿಗೆ ನಿರ್ವಹಿಸಿ ಪುರಸಭೆ ನಿಧಿಗೆ ನಷ್ಟ ಉಂಟು ಮಾಡಿದ್ದಾರೆ. ಮೋಟಾರ್ ಪಂಪ್ ಮತ್ತು ಪೆಪ್ಲೆನ್ ಸಾಮಗ್ರಿ ಅಳವಡಿಕೆ ಹಾಗೂ ಕೊಳವೆ ಬಾವಿಗಳ ಕಾಮಗಾರಿಗೆ ಸಂಬಂಧಿಸಿದಂತೆ ಕೊಟೇಷನ್ ಮುಖಾಂತರ ಗುತ್ತಿಗೆ ನಿರ್ವಹಿಸಿ ಪುರಸಭೆಗೆ ನಷ್ಟ ಉಂಟು ಮಾಡಿದ್ದಾರೆ. ಸಮ ಪ್ರಾಧಿಕಾರದ ಅನುಮೋದನೆ ಇಲ್ಲದೆ ನಿಯಮ ಬಾಹಿರವಾಗಿ ಅಂತರ ನಿಧಿ ವರ್ಗಾವಣೆ ಮಾಡಿದ್ದಾರೆ, ಠೇವಣಿ ಕಾಮಗಾರಿಗಳ ಮೇಲ್ವಿಚಾರಣೆಯಲ್ಲಿ ಸಂಪೂರ್ಣವಾಗಿ ವಿಳಂಬವಾಗಿರುವ ಕುರಿತು ವಾರ್ಡ್ವಾರು ಉದ್ದಿಮೆ ಪರವಾನಗಿ ಬೇಡಿಕೆ ವಹಿಸಿ ಹಾಜರುಪಡಿಸಿಲ್ಲ. ಮೋಟಾರ್ ವಾಹನಗಳ ನಿರ್ವಹಣೆಯಲ್ಲಿ ನ್ಯೂನತೆ ಉಂಟಾಗಲು ಕಾರಣರಾಗಿದ್ದಾರೆ. ಪುರಸಭೆಯ 3ನೇ ವಾರ್ಡ್ನ ಆಸ್ತಿ ಸಂಖ್ಯೆ 1183&227 ನಿವೇಶನದ ಒತ್ತುವರಿ ಬಗ್ಗೆ ಕ್ರಮವಹಿಸದೇ ಇರುವುದು ಕಂಡುಬಂದಿದೆ. ಅಲ್ಲದೆ, ವಾರ್ಡ್ 19ರಲ್ಲಿ ನಿಯಮ ಬಾಹಿರವಾಗಿ ಖಾತಾ ವರ್ಗಾವಣೆ ಮಾಡಿರುವುದು, ವಾರ್ಡ್ ನಂ. 18 ತೇಜು ಬಡಾವಣೆಯ ಖರಾಬು ಜಾಗವನ್ನು ನಿಯಮ ಬಾಹಿರವಾಗಿ ಖಾತೆ ನೀಡಿರುವುದು ಕಂಡುಬಂದಿದೆ. ಜತೆಗೆ ಬರ್ ಝೊನ್ ಜಾಗದಲ್ಲಿ ಅಕ್ರಮವಾಗಿ ಖಾತೆ ಮಾಡಿರುವುದು, ಬಿಎಲ್ಎಸ್ಆರ್ ವಾರ್ಡ್ ಬಡಾವಣೆಯ ವಾರ್ಡ್ ನಂ.12ರ ವ್ಯಾಪ್ತಿ ಮೀರಿ ನಿಯಮಬಾಹಿರವಾಗಿ ತಂತ್ರಾಶದಲ್ಲಿ ಖಾತೆ ನೀಡಿರುವುದು, ವಾಣಿಜ್ಯ ಮಳಿಗೆಗಳನ್ನು ವಿಲೆ ಮಾಡಿಲ್ಲ ಎಂಬ ಅಂಶಗಳ ಬಗ್ಗೆ ತನಿಖಾ ತಂಡವು ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಆದೇಶಿಸಿದ್ದಾರೆ