

ಕುಣಿಗಲ್ : ತಾಲೂಕಿನ ನಡೆಮಾವಿನಪುರದಲ್ಲಿ ಶಾಸಕ ಡಾ.ಎಚ್.ಡಿ.ರಂಗನಾಥ್, ಗ್ರಾಮ ವಾಸ್ತವ್ಯ ಹೂಡುವ ಮೂಲಕ ಕಾಡುಗೊಲ್ಲರ ಸಮಸ್ಯೆಗಳನ್ನು ಆಲಿಸಿದರು. ಶುಕ್ರವಾರ ರಾತ್ರಿ ಡಾ.ಎಚ್.ಡಿ.ರಂಗನಾಥ್, ತಹಸೀಲ್ದಾರ್ ಮಹಾಬಲೇಶ್ವರ, ತಾಪಂ ಇಒ ಜೋಸೆಫ್ ಗೊಲ್ಲರಹಟ್ಟಿಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸುತ್ತಿದಂತೆ ಕಾಡುಗೊಲ್ಲರು ಬುಡಕಟ್ಟು ಸಂಪ್ರದಾಯದಂತೆ ಸೋಬಾನೆ ಪದ ಹಾಡಿ, ಆರತಿ ಬೆಳಗಿ, ಕರಿ ಕಂಬಳಿ ಹಾಸಿ ಗಣ್ಯರನ್ನು ಸ್ವಾಗತಿಸಿದರು.
ವಾಸ್ತವ್ಯ : ಗೊಲ್ಲರಹಟ್ಟಿ ಗ್ರಾಮದ ಜಯಮ್ಮ ಎಂಬುವವರ ಮನೆಯಲ್ಲಿ ಶಾಸಕ ರಂಗನಾಥ್ ತಂಗುವ ಜತೆಗೆ ಅವರು ಮಾಡಿದ್ದ ಹುರುಳಿಕಾಳು ಬಸ್ಸಾರು, ರಾಗಿ ಮುದ್ದೆ ಸವಿದರು. ಮನೆಯ ಪಡಸಾಲೆಯ ಮೇಲೆ ಕುಳಿತು ಮಧ್ಯ ರಾತ್ರಿ 12 ಗಂಟೆಯವರೆಗೂ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗುವ ಮೂಲಕ ಸರಳತೆಗೆ ಸಾಕ್ಷಿಯಾದರು. ಬೆಳಗ್ಗೆ ಆರು ಗಂಟೆಗೆ ಎದ್ದು ಎಂದಿನಂತೆ ವಾಯು ವಿಹಾರ ವ್ಯಾಯಾಮ ಮಾಡಿ ಬಳಿಕ ಬೆಳಗ್ಗೆ 11 ಗಂಟೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಗ್ರಾಮ ವಾಸ್ತವ್ಯದಲ್ಲಿ ಪಶು, ಆರೋಗ್ಯ ತಪಾಸಣಾ ಶಿಬಿರ, ಕರೊನಾ ಲಸಿಕೆ, ಸಸಿ ವಿತರಣೆ, ಮಾಸಾಶನ, ಆಧಾರ್‌ಕಾರ್ಡ್, ನರೇಗಾ ಜಾಬ್ ಕಾರ್ಡ್ ಮೊದಲಾದ ಸೌಲಭ್ಯಗಳನ್ನು ಸ್ಥಳದಲ್ಲೇ ವಿತರಿಸಲಾಯಿತು. ಸರ್ಕಾರಿ ಇಲಾಖೆಗಳಿಂದ ಸಿಗುವ ಸೌಲಭ್ಯದ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಯಶೋಧಾ, ಉಪಾಧ್ಯಕ್ಷ ಜಬೀಉಲ್ಲಾ, ಪಿಡಿಒ ಹರೀದ್ರಗೋಪಾಲ್, ಸದಸ್ಯರಾದ ಜಯದೀಪ್‌ಕುಮಾರ್, ಗಂಗಾಧರಯ್ಯ, ಇಮ್ರಾನ್‌ಪಾಷಾ, ಸ್ವಾಮಿ ಹಾಲುವಾಗಿಲು, ಕೇಬಲ್ ಗಿರೀಶ್, ಮುಖಂಡ ಗೋವಿಂದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಮತ್ತಿತರು ಇದ್ದರು.
ಅಮಾನತು ಮಾಡಿ: ಡಿ.ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 70 ಕುರಿ, 2 ಹಸು ಮೇಕೆಗಳಿಗೆ ರೋಗ ತಗುಲಿದ್ದರೆ ಪಶು ವೈದ್ಯರು ಏನು ಮಾಡುತ್ತಿದ್ದಾರೆ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರನ್ನು ಪ್ರಶ್ನಿಸಿದ ಶಾಸಕರು, ಕೂಡಲೇ ಅವರಿಗೆ ನೋಟಿಸ್ ನೀಡಿ ಅಮಾನತು ಮಾಡಲು ಕ್ರಮಕೈಗೊಳ್ಳಬೇಕು, ಇಲ್ಲವಾದಲ್ಲಿ ನಿಮ್ಮ ಅಮಾನತ್ತಿಗೆ ಶಿಾರಸು ಮಾಡುವುದಾಗಿ ಎಚ್ಚರಿಸಿದರು.
ಕ್ಯಾಮರಾ ಅಳವಡಿಕೆಗೆ ಸೂಚನೆ: ನ್ಯಾಯ ಬೆಲೆ ಅಂಗಡಿಗಳಲ್ಲಿ ಕಾರ್ಡ್‌ದಾರರಿಂದ 20 ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಇದರಿಂದ ಕೆಂಡಾಮಂಡಲರಾದ ಶಾಸಕ ಡಾ.ರಂಗನಾಥ್, ಆಹಾರ ಶಿರಸ್ತೇದಾರ್ ಮಲ್ಲಿಕಾರ್ಜುನ್ ಅವರನ್ನು ತರಾಟೆ ತೆಗೆದುಕೊಂಡು, ಇಷ್ಟೆಲ್ಲ ಅವ್ಯವಸ್ಥೆಯಾಗಿದ್ದರೂ ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಬಳಿಕ ತಹಸೀಲ್ದಾರ್ ಮಹಾಬಲೇಶ್ವರ ಹಾಗೂ ಆಹಾರ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಅವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿಕೊಟ್ಟು ನ್ಯಾಯ ಬೆಲೆ ಅಂಗಡಿಗಳಲ್ಲಿನ ಅವ್ಯವಹಾರ ತಡೆಯಲು ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚಿಸಿದರು. ಆಹಾರ ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಪ್ರತಿಕ್ರಿಯಿಸಿ ತೆರಿಗೆ ಪಾವತಿಸುವ ವ್ಯಕ್ತಿಗಳು ಬಿಪಿಎಲ್ ಪಡಿತರ ಪಟ್ಟಿಯಲ್ಲಿದ್ದು, ಅವರನ್ನು ಗುರುತಿಸಿ 680 ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದೆ ಎಂದು ತಿಳಿಸಿದರು.