

ಕುಣಿಗಲ್ : ಮಾರ್ಕೋನಹಳ್ಳಿ ಜಲಾಶಯ ಹಾಗೂ ಕುಣಿಗಲ್ ದೊಡ್ಡಕೆರೆಗೆ ತುರ್ತಾಗಿ ಹೇಮಾವತಿ ನೀರು ಹರಿಸುವಂತೆ ಹಾಗೂ ಕೃಷಿ ಇಲಾಖೆ ಸೌಲಭ್ಯವನ್ನು ರೈತರಿಗೆ ಸಮರ್ಪಕವಾಗಿ ಒದಗಿಸುವಂತೆ ಒತ್ತಾಯಿಸಿ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಆನಂದ್‌ಪಟೇಲ್ ಮಾತನಾಡಿ, ಹೇಮಾವತಿ ಜಲಾಶಯ ಭರ್ತಿಯಾಗುವ ಹಂತದಲ್ಲಿದ್ದು, ಜಿಲ್ಲೆಯ ಯಾವುದೇ ಕೆರೆಕಟ್ಟೆಗಳು ತುಂಬಿರದ ಕಾರಣ ಎನ್‌ಬಿಸಿ ಹಾಗೂ ಟಿಬಿಸಿ ನಾಲೆಯ ಮೂಲಕ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯ ಮತ್ತು ಕುಣಿಗಲ್ ದೊಡ್ಡಕೆರೆ, ಬೇಗೂರು, ಗುನ್ನಾಗರೆ, ಕಂಟನಹಳ್ಳಿ, ದೊಡ್ಡಮಧುರೆ, ಮಂಗಳ ಜಲಾಶಯ, ಅಡೋನಹಳ್ಳಿ, ತುರುಗನೂರು ಕೆರೆಗಳಿಗೆ ಹಾಗೂ ಹೇಮಾವತಿ ಸಂಪರ್ಕವಿರುವ ಕುಣಿಗಲ್ ತಾಲೂಕಿನ ಎಲ್ಲ ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಲಿಂಕ್ ಕೆನಾಲ್‌ಗೆ ಆಗ್ರಹ : ಮಾರ್ಕೋನಹಳ್ಳಿ ಜಲಾಶಯ ತುಂಬಿ ಪ್ರತಿ ವರ್ಷ ನೀರು ಸಮುದ್ರ ಪಾಲಾಗುತ್ತಿದೆ, ನೀರನ್ನು ಮಾರ್ಕೋನಹಳ್ಳಿ ಜಲಾಶಯದ ಸಮೀಪದಲ್ಲಿ ಇರುವ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಮೂಲಕ ಹರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮಕೈಗೊಳ್ಳದೆ ಇರುವುದು ದುರಾದೃಷ್ಟಕರ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕು ಘಟಕದ ಅಧ್ಯಕ್ಷ ಅನಿಲ್‌ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದ್ದು, ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಬೇಕು. ರೈತರನ್ನು ಅಲೆಸಬೇಡಿ, ಕಳಪೆ ಬಿತ್ತನೆ ಬೀಜ ನೀಡಿ ರೈತರು ಬೆಳೆ ಕಳೆದುಕೊಂಡು ಇದರ ನಷ್ಟವನ್ನು ಕೃಷಿ ಇಲಾಖೆಯೇ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಗ್ರೇಡ್-2 ತಹಸೀಲ್ದಾರ್ ಗೋವಿಂದರಾಜುಗೆ ಮನವಿ ಸಲ್ಲಿಸಿದರು,
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಹೊಸರಂಗಯ್ಯನಪಾಳ್ಯ ವೆಂಕಟೇಶ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಲಕ್ಷ್ಮಣ್‌ಗೌಡ, ಹಾಗೂ ಸಂಘದ ಶಿವಣ್ಣ, ಕೆ.ಬಿ.ನಾಗರಾಜು, ವೆಂಕಟೇಶಪ್ಪ, ಸಣ್ಣಮರಿಯಪ್ಪ, ಕೃಷ್ಣ, ಎಸ್.ರಮೇಶ್, ಲಿಂಗರಾಜು ಮೊದಲಾದವರು ಇದರು.
ಸಾಲುಕೆರೆ ತುಂಬಿಸಿ : ಮಾರ್ಕೋನಹಳ್ಳಿ ಹಾಗೂ ಮಂಗಳ ಜಲಾಶಯ ರೈತರ ಜೀವನಾಡಿಯಾಗಿದೆ. ಸಮರ್ಪಕವಾದ ಮಳೆ ಬೀಳದೆ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ರೈತರ ಕೃಷಿಗೆ ಹಾಗೂ ಜನ ಜಾನುವಾರಗಳ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ, ಈಗ ಮಾರ್ಕೋನಹಳ್ಳಿ ಜಲಾಶಯದಲ್ಲಿ ಇರುವ ಅಲ್ಪಸ್ವಲ್ಪ ನೀರನ್ನು ಸಾಲು ಕೆರೆಗಳು ಸೇರಿ ಎಲ್ಲ ಕೆರೆ ಕಟ್ಟೆಗಳಿಗೆ ತುಂಬಿಸಿ, ರೈತರ ಬೆಳೆಗೆ ಅನುಕೂಲ ಮಾಡಿಕೊಡಬೇಕು, ಜತೆಗೆ ಮಾರ್ಕೋನಹಳ್ಳಿ ಜಲಾಶಯಕ್ಕೆ ಮುಂದಿನ ವರ್ಷಕ್ಕೆ ಆಗುವಷ್ಟು ಹೇಮೆ ನೀರನ್ನು ಹರಿಸಿ ಶೇಖರಣೆ ಮಾಡಿಕೊಳ್ಳಬೇಕೆಂದು ರೈತ ಸಂಘ ಜಿಲ್ಲಾಧ್ಯಕ್ಷ ಆನಂದ್‌ಪಟೇಲ್ ಆಗ್ರಹಿಸಿದರು.