

ಕುಣಿಗಲ್ : ಮಕ್ಕಳ ಮನಸ್ಸಿನಲ್ಲಿ ಧರ್ಮ ಹಾಗೂ ಜಾತಿಯ ವಿಷ ಬೀಜ ಬಿತ್ತುವ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಶೇ.40 ಕಮಿಷನ್‌ನನ್ನು ಮರೆಮಾಚಲು ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸಲು ಯತ್ನಿಸುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.
ಪಟ್ಟಣದ ಹೊರವಲಯದ ಗವಿಮಠ ಎಸ್‌ವಿಬಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಎಸ್.ವಿ.ಬಿ. ಸುರೇಶ್ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಬಿಜೆಪಿ ಸರ್ಕಾರ ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸಲು ಸಾಧ್ಯವಾಗದೆ, ಭಗವದ್ಗೀತೆ ಹೆಸರಿನಲ್ಲಿ ಧರ್ಮ ರಾಜಕಾರಣ ಮಾಡಲು ಹೊರಟಿದೆ. ಪಠ್ಯಕ್ಕೆ ಭಗವದ್ಗೀತೆ ರಾಮಾಯಣ, ಮಹಾಭಾರತ ಏನಾದರೂ ಸೇರಿಸಿ, ಇದಕ್ಕೆ ರಾಜಕಾರಣ ಬಣ್ಣ ಬಳಿಯುವುದು ಬಿಜೆಪಿಯ ಕಾರ್ಯ ಚಟುವಟಿಕೆಯನ್ನು ಹಾಗೂ ಜನವಿರೋಧಿ ಆಡಳಿತದ ಎಲ್ಲ ಬೆಳವಣಿಗೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ರೈತರ ಕಣ್ಣು ಒರೆಸುವ ತಂತ್ರ: ಸರ್ಕಾರ ರೈತರಿಂದ ರಾಗಿ ಖರೀದಿಸಿ ಬೆಂಬಲ ಬೆಲೆ ನೀಡುತ್ತೇವೆ ಎಂದು ಹೇಳಿತ್ತು. ಈಗ ರಾಗಿ ಖರೀದಿ ನಿಲ್ಲಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಆಹಾರ ಸಚಿವ ಉಮೇಶ್ ಕತ್ತಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಾರೆ. ಹಾಗಾದರೆ ರೈತರ ಸಮಸ್ಯೆ ಕೇಳುವವರು ಯಾರು ಎಂದು ಸುರೇಶ್ ಸರ್ಕಾರವನ್ನು ತರಾಟೆ ತೆಗೆದುಕೊಂಡರು.
ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ವಿ.ಬಿ. ಸುರೇಶ್, ಮಾಸ್ತಿಗೌಡ ಸೇರಿ ನೂರಾರು ವಿವಿಧ ಪಕ್ಷಗಳ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಿದರು. ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ರಾಮಣ್ಣ, ಬಿ.ಎನ್. ಅರುಣ್‌ಕುಮಾರ್, ಜಯಲಕ್ಷ್ಮಿ, ಮಂಜುಳಾ, ರೂಪಿಣಿ, ಉದಯ್‌ಕುಮಾರ್, ಮಾಜಿ ಅಧ್ಯಕ್ಷ ರೆಹಮಾನ್ ಶರ್ೀ, ಸದಸ್ಯ ಶಂಕರ್, ಜಿಪಂ ಮಾಜಿ ಸದಸ್ಯರಾದ ಗಂಗಶಾನಯ್ಯ, ಶಿವರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಇದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ : ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ರಾಜಕಾರಣವೇ ಬೇರೆ. ಉತ್ತರ ಪ್ರದೇಶದಲ್ಲಿ ಅನ್ನಕ್ಕಾಗಿ ಹಾಹಾಕಾರ ಇದೆ. ಆ ರಾಜ್ಯಗಳಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ವೋಟು ಕೇಳಲಾಗುತ್ತಿದೆ. ಅದೇ ಕೆಲಸವನ್ನು ಇಲ್ಲ್ಲೂ ಮಾಡಲು ಬಿಜೆಪಿ ನಾಯಕರು ಹೊರಟಿದ್ದಾರೆ. ಪಂಚ ರಾಜ್ಯ ಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್ ಮುಗಿಸುತ್ತೇವೆ ಎಂದು ಕೆಲ ನಾಯಕರು ಮಾತನಾಡುತ್ತಿದ್ದಾರೆ. ಆದರೆ, ಅದು ಅಸಾಧ್ಯದ ಮಾತು ಎಂದು ಸುರೇಶ್ ಹೇಳಿದರು.
ಗಣಿತ, ಸಮಾಜ, ವಿಜ್ಞಾನ ವಿಷಯಗಳನ್ನು ಪಠ್ಯದಿಂದ ತೆಗೆದು ಹಾಕಿ, ರಾಮಾಯಣ, ಮಹಾಭಾರತ, , ಭಗವದ್ಗೀತೆಯನ್ನು ಸೇರಿಸಿ ಯಾರು ಬೇಡ ಎನ್ನುತ್ತಾರೆ. ಶೇ 40 ಕಮಿಷನ್ ಪಡೆದು ಸರ್ಕಾರ ನಡೆಸುತ್ತಿರುವುದನ್ನು ಮರೆಮಾಚಲು, ಭಗವದ್ಗೀತೆ ರಾಜಕಾರಣ ಮಾಡಲಾಗುತ್ತಿದೆ. ಡಿ.ಕೆ. ಸುರೇಶ್, ಸಂಸದ ಮುಂದಿನ ದಿನದಲ್ಲಿ ಮೇಕೆದಾಟು ಮಾದರಿಯಲ್ಲಿ ತಾಲೂಕಿಗೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗಾಗಿ ಕುಣಿಗಲ್‌ನಿಂದ ವಿಧಾನಸೌಧದವರೆಗೆ ಪಾದಯಾತ್ರೆ ಕೈಗೊಳ್ಳಲಾಗುವುದು. ಡಾ. ಎಚ್.ಡಿ. ರಂಗನಾಥ್, ಶಾಸಕ