

ಜಮಖಂಡಿ: ನಗರಸಭೆಗೆ ಆಯ್ಕೆಯಾಗಿ ಐದು ವರ್ಷವಾಯಿತು. ನಮ್ಮ ವಾರ್ಡ್‌ನ ಜನ ನಮಗೆ ಛೀ.. ತೂ.. ಅಂತ ಉಗಿಯುತಿದ್ದಾರೆ. ನಾವು ಹೇಳಿದ್ದು ಒಂದೂ ಕೆಲಸ ಆಗ್ತಾಯಿಲ್ಲ......
ಇದು ನಗರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಸದಸ್ಯೆ ಮಲ್ಲವ್ವ ಪಾಯಗೊಂಡ ಅವರ ಆಕ್ರೋಶದ ಮಾತುಗಳು.
ಪ್ರತಿ ತಿಂಗಳೂ ಸದಸ್ಯರ ಸಭೆ ನಡೆಸಿ ಕುಂದು ಕೊರತೆ ಆಲಿಸಿ ಅಲ್ಲಿಯವರೆಗೂ ನಾನು ಇಲ್ಲಿಂದ ಹೋಗುವುದೇ ಇಲ್ಲ ಎಂದಾಗ ಉಳಿದ ಸದಸ್ಯರು ಧನಿಗೂಡಿಸಿ ಪ್ರತಿ ತಿಂಗಳೂ ಸಭೆ ನಡೆಸಬೇಕು. ಪ್ರಗತಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದ್ದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.
ನಗರದಲ್ಲಿ ಬಿಡಾಡಿ ದನಗಳಿಂದ ಸಾವು ನೋವುಗಳಾಗುತ್ತಿದ್ದು, ಅವುಗಳನ್ನು ಗೋ ಶಾಲೆಗಳಿಗೆ ಕಳುಹಿಸಬೇಕು. ದನಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ದಂಡ ಕಟ್ಟಿ ಅವರಿಗೆ ಮನವರಿಕೆ ಮಾಡಬೇಕೆಂದು ಶಾಸಕ ಜಗದೀಶ ಗುಡಗುಂಟಿ ಸೂಚಿಸಿದರು.
ನಗರದಲ್ಲಿನ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಕೂಡಲೇ ನಿಯಂತ್ರಿಸಲು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು. ಈ ಕುರಿತು ಬೆಂಗಳೂರಿನ ಕಂಪನಿಯೊಂದಿಗೆ ಟೆಂಡರ್ ಪ್ರಕ್ರಿಯೆಯಾಗಿದೆ ಎಂದು ಪೌರಾಯುಕ್ತೆ ಜ್ಯೋತಿ ಗಿರೀಶ ತಿಳಿಸಿದರು.
ನಗರದಲ್ಲಿನ ರಸ್ತೆಗಳಿಗೆ ನಾಮಲಕ ಅಳವಡಿಸಲಾಗುವುದು. ನಗರಸಭೆ ವ್ಯಾಪ್ತಿಯಲ್ಲಿನ ಇಂಡಸ್ಟ್ರೀಯಲ್ ಏರಿಯಾ ರಾಮ್ ಭಾಗವನ್ನು ನಗರಸಭೆಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಇದರಿಂದ ಟ್ಯಾಕ್ಸ್ ಆದಾಯ ಬರುತ್ತದೆ ಎಂದಾಗ ನಗರ ಪ್ರದೇಶದಲ್ಲಿನ ರಸ್ತೆ ಸೇರಿ ಒತ್ತುವರಿ ಪ್ರದೇಶಗಳನ್ನು ತೆರವುಗೊಳಿಸುವುದಕ್ಕೆ ಎಲ್ಲ ಸದಸ್ಯರು ಒಕ್ಕೊರಲವಾಗಿ ಸಮ್ಮತಿಸಿದರು.
ಹಳೆಯ ನಗರಸಭೆ ಕಟ್ಟಡವನ್ನು ಮರು ನಿರ್ಮಾಣಕ್ಕಾಗಿ ಪ್ರಪೋಸಲ್ ಕಳುಹಿಸಲಾಗಿದೆ ಎಂದರು.
ಸದಸ್ಯರಾದ ಸಿದ್ದು ಮೀಶಿ, ರಾಜೇಸಾಬ ತೇಲಸಂಗ, ಈಶ್ವರ ವಾಳೆನ್ನವರ, ದಿಲಾವರ ಶಿರೋಳ, ಕಿರಣ ಪಿಸಾಳ, ಸುನೀಲ ಶಿಂದೆ, ಕುಶಾಲ ವಾಗ್ಮೋರೆ ಇತರರು ಮಾತನಾಡಿದರು.
ನಾಷ್ಟಾ ಮಾಡಿ ಹೋಗೋಕ ಇದ್ದೀವಾ?:ಸಭೆಯಲ್ಲಿ ಮಾತನಾಡುವುದಕ್ಕೆ ಅವಕಾಶ ಇಲ್ವಾ ಅಥವಾ ನೀವು ಕೊಟ್ಟ ಚಹಾ ನಾಷ್ಟಾ ಮಾಡಿ ಹೋಗೋಕೆ ಮಾತ್ರನಾ, ನಮ್ಮ ಹತ್ರಾನೂ ಜನ ತಮ್ಮ ಸಮಸ್ಯೆ ಹೇಳಿಕೊಂಡಿರುತ್ತಾರೆ. ಅವುಗಳಿಗೂ ಸ್ಪಂದಿಸಬೇಕಲ್ಲ, ನಮಗೂ ಮಾತನಾಡಲು ಅವಕಾಶ ನೀಡಿ ಎಂದು ನಗರಸಬೆ ನೂತನ ನಾಮನಿರ್ದೇಶಿತ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ನಗರ ಅಭಿವೃದ್ಧಿಗೆ ಸಭೆ ಅರ್ಥಪೂರ್ಣ ನಡೆಯಬೇಕು. ಇಲ್ಲಿನ ಒಂದೊಂದು ನಿಮಿಷ ಅತ್ಯಮೂಲ್ಯವಾಗಿದೆ. ಅಭಿವೃದ್ಧಿಗೆ ನಾವೆಲ್ಲರೂ ಪಕ್ಷಬೇಧ ಮರೆತು ಶ್ರಮಿಸಬೇಕು ಎಂದರು.
ನಗರದಲ್ಲಿ ಜನ ಮತ್ತು ವಾಹನ ದಟ್ಟಣೆ ಹೆಚ್ಚುತ್ತಿದೆ. ಮಹಾರಾಜರ ಕಾಲದಿಂದಲೂ ಒಳಚರಂಡಿ ವ್ಯವಸ್ಥೆ ಹಾಗೇ ಇದ್ದು, ಇದಕ್ಕೆ ಪರ್ಯಾಯವಾಗಿ ಹೊಸ ಜಮಖಂಡಿ ನಿರ್ಮಿಸುವ ನಿಟ್ಟಿನಲ್ಲಿ ಒಂದು ವಿಶೇಷ ಯೋಜನೆ ಹಾಕಿಕೊಂಡಿದ್ದೇನೆ. ಈಗಾಗಲೇ ನಾನು ಕಂದಾಯ ಸಚಿವ, ಡಿಸಿಎಂ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಉಪಾಧ್ಯಕ್ಷೆ ರೇಖಾ ಕಾಂಬಳೆ ಇದ್ದರು.