ಕುಂದಗನ್ನಡಕ್ಕೆ ಪದಕೋಶ!

nighantu new
Published on

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಹ್ವಾಯ್ ಹಾಂಗಂದ್ರೆ ಎಂತೆ.. ನಮ್ ಮನಿ ಹಲ್ಯೇರು ಎಂತಾದ್ದೋ ಹೇಳ್‌ಡ್ರು..ಅದು ಎಂತಾ ಅಂತ್ಲೆ ಗೊತ್ತಾಯಿಲ್ಲೆೃೀ .. ಆ ಗಂಡ್ ಎಂತಾ ಹೇಳ್ತೇ ಅರ್ಥ ಆತಿಲ್ಲೆ..

- ಇನ್ನು ಮುಂದೆ ಯಾರಾದರೂ ಕುಂದಾಪುರ ಕನ್ನಡದಲ್ಲಿ ಹೀಗೆ ಮಾತಾಡಿದ್ರೆ ಸಮಸ್ಯೆ ಇಲ್ಲ! ಯಾಕೆಂದರೆ ಈ ಭಾಷೆ ಅರ್ಥ ಮಾಡಿಕೊಡಬಲ್ಲ ಪದಕೋಶ ಸಿದ್ಧವಾಗಿದೆ.

ಕುಂದಗನ್ನಡ ಅಧ್ಯಯನ ಪೀಠಕ್ಕಾಗಿ ಹಲವು ವರ್ಷದ ಪ್ರಯತ್ನ ಪ್ರಚಾರಕ್ಕಷ್ಟೇ ಸೀಮಿತವಾದರೆ, ಕಾರ್ಟೂನಿಸ್ಟ್ ಪಂಜು ಗಂಗೊಳ್ಳಿ ಅವರ ಇಪ್ಪತ್ತು ವರ್ಷದ ಸಾರ್ಥಕ ಪ್ರಯತ್ನದಿಂದಾಗಿ ಈಗ ಕುಂದಗನ್ನಡ ಪದಕೋಶ ಸಿದ್ಧವಾಗಿದೆ. 10 ಸಾವಿರಕ್ಕೂ ಹೆಚ್ಚು ಪದಗಳು ಅರ್ಥ ಸಹಿತ ಇರುವುದು ಈ ಪದಕೋಶದ ವಿಶೇಷ. ಕುಂದಾಪ್ರ ಕನ್ನಡ ಬದುಕಿನ ಭಾಷೆಗೆ ಸೊಗಸಾದ ನಿಘಂಟು ಇದು.

ಮುಂಬೈಯಲ್ಲಿ 2001ರ ಜುಲೈಗೆ ನಿಘಂಟು ರಚನೆಗೆ ಆರಂಭಗೊಂಡಿತು. 20 ವರ್ಷ, 10 ಸಾವಿರಕ್ಕೂ ಹೆಚ್ಚು ಪದಗಳು, 1700ಕ್ಕೂ ಮಿಕ್ಕಿ ನುಡಿಗಟ್ಟುಗಳು ಮತ್ತು ಸಾವಿರಾರು ಕುಂದಾಪ್ರ ಕನ್ನಡದ ಹಾಡು ಸಂಗ್ರಹವಾಗಿದೆ. ಮುಂಬೈಯ ಸಂಶೋಧಕ ಬಾಬು ಶಿವ ಪೂಜಾರಿ, ಸಿ.ಎ.ಪೂಜಾರಿ ಮತ್ತು ರಾಮಚಂದ್ರ ಉಪ್ಪುಂದ ನಿಘಂಟು ರಚನೆಗೆ ಕೊಡುಗೆ ನೀಡಿದ್ದಾರೆ.

ಹನ್ನೆರಡು ವರ್ಷಗಳಿಂದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಕುಂದಾಪುರ ಪರಿಸರದಲ್ಲಿ ನಾರಾಯಣ ವಿಶೇಷ ಶಾಲೆ ನಡೆಸುತ್ತ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ತಲ್ಲೂರು ನಡುಮನೆ ದತ್ತಿನಿಧಿ ಉಪನ್ಯಾಸ ಏರ್ಪಡಿಸಿ, ಸಾಮಾಜಿಕ ಜಾಗೃತಿ ಮೂಡಿಸುತ್ತಿದೆ. ಹಿಗ್ಗು ಅರಿವಿನ ಮಾಲೆ ದತ್ತಿ ಮೂಲಕ ಅಪರೂಪದ ಪುಸ್ತಕ ಪ್ರಕಾಶನಕ್ಕೆ ಸಹಾಯ ಮಾಡುತ್ತಿದೆ. ಕುಂದಗನ್ನಡ ಭಾಷೆಯ ಉಳಿವಿನ ದೃಷ್ಟಿಯಲ್ಲಿ ಕುಂದಗನ್ನಡ ನಿಘಂಟು ಪ್ರಕಟಣೆಗೆ ಕೈಹಾಕಿದ್ದೇನೆ.

ಸುರೇಶ್ ತಲ್ಲೂರು, ಆಡಳಿತ ಟ್ರಸ್ಟಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್

ಕುಂದಾಪ್ರ ಕನ್ನಡದ ಶಬ್ದಗಳು ದಿನಬಳಕೆಯಲ್ಲಿ ಇಲ್ಲ. ನಿಘಂಟುವಿನಲ್ಲಾದರೂ, ಇರಲಿ ಎಂಬ ಕಾಳಜಿಯೇ ಈ ನಿಘಂಟಿನ ಹಿಂದಿನ ಪ್ರೇರಣೆ. ಕುಂದಗನ್ನಡ ಅರ್ಥದ ಜತೆ ಅವುಗಳ ಉತ್ಪತ್ತಿ, ಚಾರಿತ್ರಿಕ, ಸಾಮಾಜಿಕ ಹಿನ್ನೆಲೆ, ಕಟ್ಟುಪಾಡು, ಆಚಾರ-ವಿಚಾರ ವಿವರಿಸುವ ಪ್ರಯತ್ನವಿದು. ಶಬ್ದಗಳ ಬಳಕೆ ಕ್ರಮವನ್ನು ಉದಾಹರಣೆ ಸಹಿತ ತೋರಿಸಲಾಗಿದೆ. ನಿಘಂಟು ಕನ್ನಡಿಗರಿಗೆ ಉಪಯುಕ್ತ. ನಿಘಂಟುಗಳಿಲ್ಲದ ಭಾಷೆಯ ಶಬ್ದಗಳು ಅಸ್ತಿತ್ವ ಕಳೆದುಕೊಂಡು ಜನರ ಮನಸ್ಸಿನಿಂದ ಮರೆಯಾಗುತ್ತವೆ.

ಪಂಜು ಗಂಗೊಳ್ಳಿ, ನಿಘಂಟು ಲೇಖಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net