ಕುಂದಾಪುರ ಸಂಚಾರಿ ಠಾಣೆ ಶಿಥಿಲ

police web
Published on

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಕುಂದಾಪುರ ಸಂಚಾರಿ ಪೊಲೀಸ್ ಠಾಣೆ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಠಾಣೆ ಎದುರಿಗೆ ಮಿನಿ ವಿಧಾನ ಸೌಧ, ಪಕ್ಕದಲ್ಲಿ ಪ್ರವಾಸಿ ಬಂಗ್ಲೆ, ಇನ್ನೊಂದೆಡೆ ನ್ಯಾಯಾಲಯ, ಠಾಣೆಗೆ ತಾಗಿಕೊಂಡು ಹಳೇ ತಾಲೂಕು ಕಚೇರಿ ಇದ್ದರೂ ಸಂಚಾರಿ ಪೊಲೀಸ್ ಠಾಣೆಗೆ ಮಾತ್ರ ಇನ್ನೂ ಹೊಸ ಕಟ್ಟಡ ನಿರ್ಮಾಣವಾಗಿಲ್ಲ

ಹಿಂದೆ ವೃತ್ತನಿರೀಕ್ಷಕರ ಕಚೇರಿ, ಕ್ರೈಂ, ಪಿಎಸ್‌ಐ ಕಚೇರಿ, ಬಂಧಿಖಾನೆ ಎಲ್ಲವೂ ಇತ್ತು. ಹೊಸ ಪೊಲೀಸ್ ಠಾಣೆ ನಂತರ ವೃತ್ತ ನಿರೀಕ್ಷರ ಕಚೇರಿ, ಠಾಣಾಧಿಕಾರಿ ಕಚೇರಿ, ಬಂಧಿಖಾನೆ ಸ್ಥಳಾಂತರಗೊಂಡಿದ್ದು, ಹಳೇ ಕಚೇರಿ ಸಂಚಾರಿ ಪೊಲೀಸ್ ಠಾಣೆ ಆಗಿದೆ. ಕಟ್ಟಡದ ಕಿಟಕಿ ಬಾಗಿಲು ಕಳಚಿಕೊಳ್ಳುತ್ತಿದ್ದು, ಗೋಡೆ ಕೂಡ ಭದ್ರವಾಗಿಲ್ಲ. ಕಳೆದ ವರ್ಷ ಫ್ಯಾನ್ ಕಳಚಿ ಬಿದ್ದಿತ್ತು. ಸೋರುವಿಕೆಯಿಂದ ಕಚೇರಿ ಕಡತ, ಕಂಪ್ಯೂಟರ್ ರಕ್ಷಣೆ ದೊಡ್ಡ ಸಮಸ್ಯೆಯಾಗಿದೆ. ಸಂಚಾರ ಸಮಸ್ಯೆ ಪರಿಹರಿಸುವ ಟ್ರಾಫಿಕ್ ಪೊಲೀಸರಿಗೆ ಅಭದ್ರತೆಯ ಭಯ ಎದುರಾಗಿದೆ. ಕುಂದಾಪುರ, ಅಮಾಸೆಬೈಲು, ಗಂಗೊಳ್ಳಿ, ಬೈಂದೂರು, ಕೊಲ್ಲೂರು, ಶಂಕರನಾರಾಯಣ, ಕೋಟದಲ್ಲಿ ಹೊಸ ಕಟ್ಟಡದಲ್ಲಿ ಠಾಣೆಯಿದ್ದು, ಕುಂದಾಪುರ ಸಂಚಾರಿ ಪೊಲೀಸ್ ಠಾಣೆ ಕಪ್ಪುಚುಕ್ಕೆಯಾಗಿದೆ.

ಡಾ. ವಿ.ಎಸ್. ಆಚಾರ್ಯ ನೆನಪು

ಕುಂದಾಪುರ ಪೊಲೀಸ್ ಠಾಣೆ ನೋಡಿದಾಗಲೆಲ್ಲ ಗೃಹ ಸಚಿವರಾಗಿದ್ದ ದಿ.ಡಾ. ವಿ.ಎಸ್.ಆಚಾರ್ಯ ನೆನಪಾಗುತ್ತಾರೆ. ಕುಂದಾಪುರ ಪೊಲೀಸ್ ಠಾಣೆ ವೈರುಧ್ಯಗಳ ಬಗ್ಗೆ ಪತ್ರಕರ್ತರು ಗಮನ ಸೆಳೆದಿದ್ದರು. ಹೊಸದಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನ ಸೌಧದಲ್ಲಿ ಪೊಲೀಸ್ ಕಚೇರಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಕುಂದಾಪುರದಲ್ಲಿ ಈಗಿರುವ ಪೊಲೀಸ್ ಠಾಣೆ ಹಿಂದೆ ನೂತನ ಕಟ್ಟಡ ನಿರ್ಮಿಸಲಾಗುತ್ತದೆ. ಶೀಘ್ರದಲ್ಲಿ ಠಾಣೆ ಅರಂಭಿಸುತ್ತೇನೆ ಎಂದು ಹೇಳಿದ್ದು, ಅದರಂತೆ ನಡೆದುಕೊಂಡರು.

ಡೀಮ್ಡ್ ಫಾರೆಸ್ಟ್ ನೆಪ

ಡೀಮ್ಡ್ ಫಾರೆಸ್ಟ್ ಏರಿಯಾದಲ್ಲಿ ಕಟ್ಟಡ ಕಟ್ಟಿದರೆ ಪರವಾನಗಿ ಸಿಗಲ್ಲ. ಆದರೆ ಬ್ರಿಟಿಷ್ ಕಾಲದಲ್ಲಿ ಕಟ್ಟಡ ಆಗಿದ್ದರೂ ಡೀಮ್ಡ್ ಫಾರೆಸ್ಟ್ ಹೆಸರಲ್ಲಿ ಆರ್‌ಟಿಸಿ ಇದೆ. ಪ್ರವಾಸಿ ಮಂದಿರ, ಮಿನಿ ವಿಧಾನ ಸೌಧ, ನ್ಯಾಯಾಲಯ ಸಮುಚ್ಚಯ ಹಾಗೂ ಹೊಸ ಕಟ್ಟಡ ಡೀಮ್ಡ್ ಫಾರೆಸ್ಟ್ ವಿರಹಿತವಾಗಿದೆಯೇ? ಮೊದಲೇ ಕಟ್ಟಡವಿದ್ದಿದ್ದರಿಂದ ಡೀಮ್ಡ್ ಫಾರೆಸ್ಟ್ ವಿರಹಿತಗೊಳಿಸಿ ಈಗಿರುವ ಜಾಗದಲ್ಲೇ ಕಟ್ಟಡಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ಸಂಚಾರಿ ಠಾಣೆ ಕಟ್ಟಡ ಹಳತಾಗಿರುವುದರಿಂದ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಸರ್ಕಾರಿ ಜಾಗ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಹೆದ್ದಾರಿ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಾಗದ ಅನ್ವೇಷಣೆ ಮಾಡಲಾಗುತ್ತದೆ. ಜಾಗ ಸಿಕ್ಕಿದ ಕೂಡಲೇ ಕಟ್ಟಡ ಪ್ರಕ್ರಿಯೆ ನಡೆಯಲಿದೆ. ಜಿಲ್ಲಾಧಿಕಾರಿ ಉತ್ತಮ ಜಾಗ ಕೊಡುತ್ತೇನೆ ಎನ್ನುವ ಭರವಸೆ ನೀಡಿದ್ದು, ಜಾಗದ ನಿರೀಕ್ಷೆಯಲ್ಲಿದ್ದೇವೆ.

ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಡುಪಿ

ಪೊಲೀಸ್ ಠಾಣೆ ಕಟ್ಟಡಕ್ಕೆ ಎಲ್ಲೆಲ್ಲಿ ಜಾಗ ಬೇಕು ಅಂತ ಕೇಳಿದ್ದಾರೋ ಅಲ್ಲೆಲ್ಲ ಜಾಗ ನೀಡಲಾಗಿದೆ. ಹೊಸ ಕಟ್ಟಡಕ್ಕೆ ಜಿಲ್ಲಾಡಳಿತ ಸಹಕಾರ ಮಾಡಿದೆ. ಹೆಬ್ರಿ ಪೊಲೀಸ್ ಠಾಣೆಗೂ ಜಾಗ ಕೇಳಿದ್ದು ಸರ್ಕಾರಿ ಜಾಗ ನೀಡಿದ್ದರಿಂದ ಹೊಸ ಕಟ್ಟಡ ಆಗಿದೆ. ಕುಂದಾಪುರ ಠಾಣೆಗೂ ಜಾಗ ಕೇಳಿದ್ದು, ಎಲ್ಲಿ ಸರ್ಕಾರಿ ಜಾಗ ಗುರುತಿಸಿ ಕೇಳುತ್ತಾರೋ ಅಲ್ಲಿ ನೀಡಿ ಹೊಸ ಕಟ್ಟಡಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net