ಕುಂದಾಪುರ ಪುರಸಭೆ ಮೇಲ್ದರ್ಜೆಗೆ

purasabhe new
Published on

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಕುಂದಾಪುರ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರುವ ಕನಸಿಗೆ ರೆಕ್ಕೆ ಬಂದಿದೆ. ಪುರಸಭೆ ಆಸುಪಾಸಿನ ಐದು ಗ್ರಾಮ ಪಂಚಾಯಿತಿ ಸೇರಿಸಿಕೊಂಡು ನಗರಸಭೆಯಾಗಿ ಪರಿವರ್ತಿಸುವ ವರದಿಯನ್ನು ಉಡುಪಿ ನಗರಾಭಿವೃದ್ಧಿ ಕೋಶ ಸರ್ಕಾರಕ್ಕೆ ಸಲ್ಲಿಸಿದ್ದು, ಚೆಂಡು ಸರ್ಕಾರದ ಅಂಗಳದಲ್ಲಿದೆ.

ಅಂತಿಮ ಹಂತದ ಪರಿಶೀಲನೆ ನಡೆಸಿ ಗ್ರೀನ್ ಸಿಗ್ನಲ್ ಕೊಟ್ಟರೆ ಕುಂದಾಪುರ ಮುಂದಿನ ದಿನಗಳಲ್ಲಿ ನಗರಸಭೆ!

ಕುಂದಾಪುರ ನಗರಸಭೆಯಾದರೆ ಅನುದಾನ ಮೂರು ಪಟ್ಟು ಹೆಚ್ಚಲಿದ್ದು, ಇದರಿಂದ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂಬ ಲೆಕ್ಕಾಚಾರವಿದೆ. ನಗರಸಭೆಯಾದರೆ ಸದಸ್ಯರ ಸಂಖ್ಯೆ ಹೆಚ್ಚುವುದರಿಂದ ಅನುದಾನವೂ ಎರಡು ಪಟ್ಟು ಸಿಗಲಿದೆ. ಹೊಸ ನಗರಸಭೆ ಹಿನ್ನೆಲೆಯಲ್ಲಿ ವಿಶೇಷ ಅನುದಾನ ಕೂಡ ದೊರೆಯಲಿದೆ.

ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು, ಪಂಚಾಯಿತಿ ಅಧಿಕಾರಿ ಹಾಗೂ ಜನಪ್ರತಿನಿಧಿ ಜತೆ ಸಭೆ ನಡೆಸಿದ್ದು ನಾಲ್ಕು ಪಂಚಾಯಿತಿ ನಗರಸಭೆ ಸೇರಲು ಒಪ್ಪಿದ್ದು, ಕಂದಾವರ ಗ್ರಾಪಂ ಮಾತ್ರ ಹಿಂದೇಟು ಹಾಕುತ್ತಿದೆ. ಕೋಟೇಶ್ವರ, ಹಂಗಳೂರು, ಬೀಜಾಡಿ, ಕೋಣಿ ಪಂಚಾಯಿತಿ ಒಪ್ಪಿದ್ದು ಈ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿ ನಿರ್ಣಯ ಮಾಡಿ ಕಳುಹಿಸಿದೆ.

1973ರಲ್ಲಿ ಪುರಸಭೆ ಆರಂಭ

ಕುಂದಾಪುರ ಪುರಸಭೆ 1973ರಲ್ಲಿ ಆರಂಭವಾಯಿತು. 14 ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿದ್ದು, 23 ವಾರ್ಡ್‌ಗಳಿವೆ. 30,450 ಜನಸಂಖ್ಯೆ ಇದ್ದು ಪ್ರತಿದಿನ 2.94 ಎಂಎಲ್‌ಡಿ ನೀರು ಸರಬರಾಜು ಮಾಡುತ್ತಿದೆ. 78 ಕಿ.ಮೀ. ರಸ್ತೆ, 4 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಿದೆ. 4,793 ನಿವೇಶನಗಳು ಖಾಲಿಯಿದ್ದು 5,331 ಮನೆಗಳಿವೆ. 2,332 ವಾಣಿಜ್ಯ ಕಟ್ಟಡಗಳಿವೆ. 110 ವಾಣಿಜ್ಯ, ಮನೆಗಳಿವೆ. 1,628 ಬೀದಿ ದೀಪಗಳಿವೆ.

ನಿಬಂಧನೆಗಳೇನು?

ಪುರಸಭೆ ಜನಸಂಖ್ಯೆ 20,000ದಿಂದ 1 ಲಕ್ಷ ಇರಬೇಕು, ಒಂದು ಚದರ ಕಿ.ಮೀ. ವ್ಯಾಪ್ತಿಯಲ್ಲಿ 1,500 ಜನಸಂಖ್ಯೆ ಇರಬೇಕು, ಶೇ.50 ಕೃಷಿಯೇತರ ಭೂಮಿ ಇರಬೇಕು, ತೆರಿಗೆ 9ಲಕ್ಷಕ್ಕಿಂತ ಹೆಚ್ಚಿಗೆ ಸಂಗ್ರಹವಾಗಬೇಕು, ಪಟ್ಟಣ ಪಂಚಾಯಿತಿಯಲ್ಲಿ ಕನಿಷ್ಠ 10,000ದಿಂದ 20,000ದ ಒಳಗೆ ಜನಸಂಖ್ಯೆ ಇರಬೇಕು, ಚದರ ಕಿ.ಮೀ.ವ್ಯಾಪ್ತಿಯಲ್ಲಿ ಜನಸಂಖ್ಯೆ 400 ಇರಬೇಕು, ನಗರಸಭೆಗೆ 50,000 ರಿಂದ 3 ಲಕ್ಷದ ಒಳಗೆ ಜನಸಂಖ್ಯೆ ಇರಬೇಕು, ಚದರ ಕಿ.ಮೀ. ವ್ಯಾಪ್ತಿಯ ಜನಸಂಖ್ಯೆ 1,500 ಇರಬೇಕು, ಶೇ.50ರಷ್ಟು ಕೃಷಿಯೇತರ ಭೂಮಿ ಇರಬೇಕು, ಎಲ್ಲ ತೆರಿಗೆ ಸೇರಿ 9 ಲಕ್ಷಕ್ಕಿಂತ ಹೆಚ್ಚಿಗೆ ಸಂಗ್ರಹ ಇರಬೇಕು ಎಂಬ ನಿಯಮವಿದೆ.

ನಗರಾಭಿವೃದ್ಧಿ ಕೋಶದಿಂದ ಕಡತ ಸಿದ್ಧಪಡಿಸಿದ್ದು, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೋಟೇಶ್ವರ, ಹಂಗಳೂರು, ಬೀಜಾಡಿ, ಕೋಣಿ ನಗರಸಭೆ ವ್ಯಾಪ್ತಿಗೆ ಸೇರಲು ಒಪ್ಪಿಗೆ ಸೂಚಿಸಿದ್ದು, ಕಂದಾವರ ಒಪ್ಪಿಗೆ ಕೊಡದ ಕಾರಣ ಕಂದಾವರ ಗ್ರಾಪಂನ್ನು ಬಿಟ್ಟು ಸರ್ಕಾರಕ್ಕೆ ವರದಿ ನೀಡಲಾಗಿದೆ.

ಅರುಣಪ್ರಭಾ, ಜಿಲ್ಲಾ ಯೋಜನಾ ನಿರ್ದೇಶಕ, ಉಡುಪಿ

ಪ್ರತಿ ಚ.ಕಿ.ಮೀ. ಜನಸಾಂದ್ರತೆ 1,400 ಮಾತ್ರ ಇರುವುದರಿಂದ ಸ್ವಲ್ಪ ಸಮಸ್ಯೆ ಆಗಿದೆ. ಹೊಸ ಪ್ರಸ್ತಾವದಲ್ಲಿ 68,260 ಜನಸಂಖ್ಯೆ ಇದೆ. ಕುಂದಾಪುರ ಹಳೇ ತಾಲೂಕು ಕೇಂದ್ರವಾದ ಕಾರಣ ಸಚಿವ ಸಂಪುಟದಲ್ಲಿ ನಗರಸಭೆಯಾಗಿ ಪರಿವರ್ತಿಸುವ ಸಾಧ್ಯತೆ ಇದೆ. ಪುರಸಭೆ ಮೇಲ್ದರ್ಜೆಗೆ ಏರಿಸುವ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ನಗರಸಭೆ ಅರ್ಹತೆ ಬರುವುದಕ್ಕೆ ಹಾಗೂ ಸೇರುವ ಎಲ್ಲ ಪಂಚಾಯಿತಿ ಒಗ್ಗೂಡಿಸಿ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ನೀಡಲಾಗಿದೆ. ಕುಂದಾಪುರ ನಗರಸಭೆಯಾಗಿ ಬದಲಾಗುವುದರಿಂದ ಜನರಿಗೆ ಅನುಕೂಲವಾಗುವುದಾದರೆ ಮೇಲ್ದರ್ಜೆಗೆ ಏರಿಸುವ ಎಲ್ಲ ಪ್ರಯತ್ನ ಮಾಡಲಾಗುತ್ತದೆ.

ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ, ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net