ಕುಂದಾಪುರ ಪುರಸಭೆ ಕಟ್ಟಡಕ್ಕೇ ನೀರಿಲ್ಲ

no water new
Published on

ವಿಜಯವಾಣಿ ಓದುಗರೊಬ್ಬರು ಪುರಸಭೆ ಕಟ್ಟಡದ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದು, ವಿಜಯವಾಣಿ ಹಿರಿಯ ವರದಿಗಾರ ಶ್ರೀಪತಿ ಹೆಗಡೆ ಹಕ್ಲಾಡಿ ರಿಯಾಲಿಟಿ ಚೆಕ್ ಮೂಲಕ ಪುರಸಭೆ ಕಟ್ಟಡ ಅವ್ಯವಸ್ಥೆ ಬಗ್ಗೆ ಓದುಗರ ಮುಂದಿಟ್ಟಿದ್ದಾರೆ.

ಕುಂದಾಪುರ: ತ್ಯಾಜ್ಯ ನಿರ್ವಹಣೆ ಮೂಲಕ ಪುರಸಭೆ ಪ್ರಶಸ್ತಿ ಬಾಚಿಕೊಂಡಿದೆ. 24*7 ಕುಡಿಯುವ ನೀರು ಪೂರೈಕೆ ಮಾಡುವ ರಾಜ್ಯದ ಮೊದಲ ಪುರಸಭೆ ಎಂಬ ಹೆಸರು ಪಡೆದಿದೆ. ಪ್ರಮುಖ ರಸ್ತೆಗಳು ಸರ್ವಋತು. ಸುಂದರ ಕುಂದಾಪುರ ಎನ್ನುವ ಬಿರುದು. ಇಷ್ಟೆಲ್ಲ ಮೈಲಿಗಲ್ಲು ಸ್ಥಾಪಿಸಿರುವ ಪುರಸಭೆ ಕಟ್ಟಡಕ್ಕೆ ಮಾತ್ರ ನೀರು ಪೂರೈಕೆ ಇಲ್ಲ.!

ಪುರಸಭೆ ಕಟ್ಟಡ ಶೌಚಗೃಹಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಶೌಚಗೃಹ ಹಾದಿಯಂತೂ ಮೂಗು ಮುಚ್ಚಿ ಹೋಗಬೇಕು.. ಇನ್ನು ಒಳಹೊಕ್ಕು ನೋಡಿದರೆ ಅಲ್ಲಲ್ಲಿ ಗುಟ್ಖಾ ರಸದ ಚಿತ್ತಾರ, ಖಾಲಿ ಪೊಟ್ಟಣಗಳು ರಾಶಿಬಿದ್ದು ವಾಕರಿಕೆ ತರಿಸುತ್ತವೆ. ನೀರು ಇಲ್ಲದೆ ಮಹಿಳೆಯರು ಸೇರಿ ನೂರಾರು ಬಾಡಿಗೆದಾರರು ಮೂತ್ರ ಕಟ್ಟಿಕೊಳ್ಳಬೇಕು.. ಇಲ್ಲವೇ ಸಾರ್ವಜನಿಕ ಮೂತ್ರದೊಡ್ಡಿಗೆ ಹೋಗಬೇಕು.

ಕಟ್ಟಡ ನೀರಿನ ಸಮಸ್ಯೆ ಬಗ್ಗೆ ಪುರಸಭೆಗೆ ಕೇಳಿದರೆ, ಪೈಪ್‌ಲೈನ್ ಕೆಳಗಿದ್ದು, ನೀರಿನ ಒತ್ತಡ ಸಾಲದೆ ನೀರು ಏರುತ್ತಿಲ್ಲ ಎಂಬ ಉತ್ತರ ಬರುತ್ತದೆ. ಹಾಗಾದರೆ ಹೋಟೆಲ್ ಕಟ್ಟಡಕ್ಕೆ ನೀರು ನಿರಂತರ ಪೂರೈಕೆ ರಹಸ್ಯಕ್ಕೆ ಪುರಸಭೆಯೇ ಉತ್ತರಿಸಬೇಕು.

ಪುರಸಭೆ ಕಟ್ಟಡದಲ್ಲಿ ವಾಣಿಜ್ಯ ಮಳಿಗೆಗಳು, ಕಚೇರಿಗಳು, ಕೋಆಪರೇಟಿವ್ ಸೊಸೈಟಿ ಇವೆ. ನೆಲ ಮಾಳಿಗೆಯಲ್ಲಿ ಹೋಟೆಲ್, ಬಸ್ ಬುಕ್ಕಿಂಗ್ ಏಜೆನ್ಸಿ, ಕೂಲ್ ಡ್ರಿಂಕ್ಸ್, ಬೀಡಾ ಅಂಗಡಿಗಳಿವೆ. ಪ್ರತಿದಿನ ಕಟ್ಟಡಕ್ಕೆ ಸಾವಿರಾರು ಜನ ವಿಸಿಟ್ ಮಾಡುತ್ತಾರೆ. ಬಾಡಿಗೆ ಇರಿವವರಿಗಾಗಿಯೇ ಕಟ್ಟಡದಲ್ಲಿ ಶೌಚಗೃಹವಿದ್ದರೂ ನೀರೇ ಬಾರದೆ, ದೈಹಿಕ ಬಾಧೆ ಕಟ್ಟಿಕೂರಬೇಕು.. ಇಲ್ಲವೇ ಹಣಕೊಟ್ಟು ಸಾರ್ವಜನಿಕ ಮೂತ್ರದೊಡ್ಡಿಗೆ ಹೋಗಬೇಕು.. ಅದಕ್ಕೆ ಕರೋನಾ ಭಯ

ಪುರಸಭೆ ಕಟ್ಟಡ ಎತ್ತರದಲ್ಲಿದ್ದು, ನೀರು ಏರದಿರುವುದೇ ಸಮಸ್ಯೆಗೆ ಮೂಲ ಕಾರಣ. ಕಟ್ಟಡಕ್ಕೆ ಸ್ವಜಲಧಾರೆ ಯೋಜನೆಯಲ್ಲಿ ನೀರು ಪೂರೈಸುವ ಪ್ರಯತ್ನ ಮಾಡಲಾಗುತ್ತದೆ. ಈಗಾಗಲೇ ಚಿಕ್ಕನಸಾಲು ಅಂಚೆ ಕಚೇರಿ ಬಳಿ ಹೊಸ ಪೈಪ್‌ಲೈನ್ ಕಾಮಗಾರಿ ಆರಂಭಿಸಿದ್ದು, ಆದಷ್ಟು ಬೇಗ ಪುರಸಭೆ ಕಟ್ಟಡದ ನೀರಿನ ಸಮಸ್ಯೆ ಪರಿಹರಿಸಲಾಗುತ್ತದೆ.

ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net