ಫುಟ್‌ಪಾತ್ ಅತಿಕ್ರಮಣ ವಿರುದ್ಧ ಕ್ರಮ

purasbhe
ಕುಂದಾಪುರ ಪುರಸಭೆ ಸಾಮಾನ್ಯ ಸಭೆ ಪುರಸಭಾ ಕಾರ್ಯಾಲಯದ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಜರಗಿತು.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕುಂದಾಪುರ ಪುರಸಭೆಯ ಸಾಮಾನ್ಯ ಸಭೆ ಪುರಸಭಾ ಕಾರ್ಯಾಲಯದ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಜರಗಿತು.

ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಕಳಪೆ ಕಾಮಗಾರಿಗಳ ಕುರಿತು ಪ್ರಸ್ತಾಪಿಸಿದ ಸದಸ್ಯ ಗಿರೀಶ್, ಕುಂದಾಪುರ ನಗರದಲ್ಲಿ ಬಹುತೇಕ ಕಡೆ ಕಳಪೆ ಕಾಮಗಾರಿ ನಡೆದಿದೆ. ಕಾಮಗಾರಿಗಳನ್ನು ಥರ್ಡ್ ಪಾರ್ಟಿ ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ತಕ್ಕಂತೆ ವರದಿ ನೀಡಲಾಗಿದೆ. ಇದರ ಬಿಲ್ ಕೂಡ ತರಾತುರಿಯಲ್ಲಿ ಪಾವತಿಸಲಾಗಿದೆ. ಫುಟ್‌ಪಾತ್‌ಗಳ ಅತಿಕ್ರಮಣ ನಡೆಯುತ್ತಿದ್ದು, ಪಾದಚಾರಿಗಳು ಮಾರ್ಗದಲ್ಲೆ ನಡೆಯಬೇಕಾದ ಸ್ಥಿತಿಯಿದೆ. ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು. ಇದಕ್ಕೆ ಸದಸ್ಯರೆಲ್ಲರೂ ದನಿಗೂಡಿಸಿದರು.

ಪುರಸಭೆಯ ಸಭಾ ಕಾರ್ಯಸೂಚಿಯಲ್ಲಿ ನೆಹರು ಮೈದಾನ ಸಮಸ್ಯೆ, ಹಕ್ಕು ಪತ್ರ, ಕೋಡಿ ಬ್ಯಾಕ್‌ವಾಟರ್ ಸಮಸ್ಯೆ ಸಹಿತ ಪುರಸಭೆ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳ ಬಗ್ಗೆ ಪ್ರಸ್ತಾವನೆಗಳಿಲ್ಲ ಎಂದು ಸದಸ್ಯರು ಆರೋಪಿಸಿದರು.

ವೆಂಕಟರಮಣ ಶಾಲೆ ಹತ್ತಿರ ಮಳೆ ನೀರು ಹರಿದು ಹೋಗುವ ಚರಂಡಿ ದುರಸ್ತಿಗೊಳಿಸದಿರುವ ಕುರಿತು ಸದಸ್ಯೆ ಅಶ್ವಿನಿ ಸಭೆಯ ಗಮನ ಸೆಳೆದರು.  ಕಳಪೆ ಕಾಮಗಾರಿಗಳಿಂದ ಉಂಟಾದ ನಷ್ಟದ ಕುರಿತು ಪ್ರತಿಪಕ್ಷ ಸದಸ್ಯ ಚಂದ್ರಶೇಖರ ಖಾರ್ವಿ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಪುರಸಭೆ ಅಧ್ಯಕ್ಷರು ತಮಗಿಷ್ಟ ಬಂದವರಿಗೆ ಕಾಮಗಾರಿಗಳ ಗುತ್ತಿಗೆ ನೀಡಿ ಕಳಪೆ ಕೆಲಸಕ್ಕೆ ಕಾರಣರಾಗಿದ್ದಾರೆ. ಇದರಿಂದ ಪುರಸಭೆಗೆ ಸುಮಾರು 25ರಿಂದ 30 ಲಕ್ಷ ರೂ. ನಷ್ಟವುಂಟಾಗಿದೆ ಎಂದು ನೇರ ಆರೋಪ ಮಾಡಿದರು.

ಅಧ್ಯಕ್ಷ ಮೋಹನದಾಸ ಶೆಣೈ ಸಹಿತ ಪುರಸಭೆ ಸದಸ್ಯರಾದ ಸಂತೋಷ್, ಪ್ರಭಾಕರ, ಗಿರೀಶ್ ಪ್ರಕಿಕ್ರಿಯಿಸಿ, ಪುರಸಭೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಪ್ರತಿಪಕ್ಷದವರು ಸೂಕ್ತ ದಾಖಲೆಗಳನ್ನು ಒದಗಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ತನಿಖೆ ನಡೆಸಲು ಚಂದ್ರಶೇಖರ ಖಾರ್ವಿ ಒತ್ತಾಯಿಸಿದಾಗ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಪುರಸಭೆ ಅಧಿಕಾರಿಗಳು ಹಾಗೂ ಇಂಜಿನಿಯರುಗಳು ಕಾಮಗಾರಿಗಳನ್ನು ಪರಿಶೀಲಿಸುತ್ತಿಲ್ಲ ಎಂದು ಸದಸ್ಯ ಶ್ರೀಧರ್ ಶೇರುಗಾರ್ ಆರೋಪಿಸಿದರು. ಕುಂದಾಪುರ ದೇವಸ್ಥಾನದ ರಥೋತ್ಸವ ಸಮಯದಲ್ಲಿ ಮುಖ್ಯರಸ್ತೆಯಲ್ಲಿ ಹಾಕಿದ ಹಂಪ್ಸ್‌ ತೆರವು ಮಾಡಿ 8 ತಿಂಗಳು ಕಳೆದರೂ ಮರುನಿರ್ಮಿಸಿಲ್ಲ ಎಂದು ಸದಸ್ಯ ಪ್ರಭಾಕರ್ ಅವರು ಆರೋಪಿಸಿದರು.

ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವನಿತಾ ಬಿಲ್ಲವ, ಮುಖ್ಯಾಧಿಕಾರಿ ಆನಂದ ಜೆ. ಉಪಸ್ಥಿತರಿದ್ದರು.

ಮಾತಿನ ಚಕಮಕಿ

ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ನಡೆದ ಕಳಪೆ ಕಾಮಗಾರಿಗಳು, ಹಂಪ್ಸ್ ವಿಚಾರ, ಫುಟ್‌ಪಾತ್ ಅತಿಕ್ರಮಣ, ದಾರಿದೀಪ ಸಮಸ್ಯೆ ಸಹಿತ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಬಿರುಸಿನ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ಉಂಟಾಯಿತು.

ಸೂಚನಾ ಫಲಕ ಅಳವಡಿಸಿ

ಮುಂದಿನ ದಿನಗಳಲ್ಲಿ ಪುರಸಭೆಯಿಂದ ನಿರ್ಮಿಸಲಾದ ಹಂಪ್ಸ್‌ಗಳನ್ನು ಯಾರು ತೆರವುಗೊಳಿಸುತ್ತಾರೋ ಅವರಿಂದಲೇ ಮರುನಿರ್ಮಿಸಿಕೊಡುವ ನಿರ್ಣಯ ಕೈಗೊಳ್ಳಲಾಯಿತು. ಕುಂದಾಪುರ ನಗರದ ಮುಖ್ಯ ರಸ್ತೆಯಲ್ಲಿ ವೇಗ ಮಿತಿಯ ಬಗ್ಗೆ ಯಾವುದೇ ಸೂಚನಾ ಫಲಕ ಇಲ್ಲ. ಹಾಗಾಗಿ ಸೂಚನಾ ಫಲಕ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net