

ಕುಂದಾಪುರ: ಅದೆಂತೋ ಆಡ್ತನಂಬ್ರಲೆ ಅದೆಲ್ಲಾ ಎಂತಕೆ. ಇಷ್ಟ್ ಸಣ್ಕಿತ್ತು ಗಂಡು.. ಎಂತಾ ಭಾರ ಎತ್‌ತ್ತಂಬ್ರಾ..ಕುಸ್ತಿ ಆಡುತ್ತಂಬ್ರಾ..ಮೈಕೈ ಗಾಯಮಾಡ್ಕಂಬ್ಕಾ..ಬಿಟ್ಹಾಕೂಕೆ ಹೇಳಾ ಅಂದೀದೆ. ಆರೆ ನನ್ನ ಮಗ ಎರೆಡೆರೆಡು ಪದಕ ತತ್ತಾ ಆಂತ ಗೊತ್ತೇ ಇರ್ರ್‌ಲಿಲ್ಲ್ಯೇ ಮಾರ‌್ರೇ ಆವತ್ ನಾ ಹೇಳೀದ ಕೇಂಡ್ ಆಡೂದ ಬಿಟ್ಟೀರೆ ಈವತ್ತು ಇಷ್ಟ್ ಎತ್ರಕ್ಕೆ ಏರೂಕೆ ಆತಿತ್ತಾ..ನನ್ನ ಮಗ ಸಾಧಿಸಿದ. ಜಗ ಮೆಚ್ಚಿದ ಗುರು ನಮ್ ಮಗ ಎಂಬೂಕೆ ಹೆಮ್ಮಿಯಾತ್ತೇ..
ಕಾಮನ್‌ವೆಲ್ತ್ ವೇಯ್ಟ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಗುರುರಾಜ ಭಾನುವಾರ ಸ್ವಗೃಹಕ್ಕೆ ಆಗಮಿಸಿದ ಸಂದರ್ಭ ಮಗನ ಕುರಿತು ತಂದೆ ಮಹಾಬಲ ಪೂಜಾರಿ ಸ್ಥಳೀಯ ಭಾಷೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಹೀಗೆ.
ಮನೆಗೆ ಬಂದ ಮಗ ಗುರುರಾಜ ಪೂಜಾರಿಯನ್ನು ತಂದೆ, ತಾಯಿ ಅಪ್ಪುಗೆಯ ಮೂಲಕ ಬರಮಾಡಿಕೊಂಡರು. ಪತ್ನಿ ಸಮೇತ ಬಂದ ಗುರುರಾಜನನ್ನು ಮನೆಯವರು ಆರತಿ ಬೆಳಗಿ ಸ್ವಾಗತಿಸಿದರು. ಮನೆಯಲ್ಲಿ ಸಂಭ್ರಮ ಸಡಗರ ಕಂಡುಬಂದರೆ, ಪಟಾಕಿ ಸಿಡಿಸಿ ಸಿಹಿ ಹಂಚಿ ಊರವರು, ಮನೆಯವರು ಸಂಭ್ರಮಿಸಿದರು.
ಇವತ್ತು ನಾ ಎಲ್ಲಿ ಹೋರೂ ಅಲ್ಕಾಣಿ ಗುರು ತಂದೆ ಬಂದ್ರು ಅಂತ್ರು. ಹ್ವಾಯ್ ನಿಮ್ಮ ಮಗ ದೇಶಕ್ಕಾಗಿ ಪದಕ ತಂದೀದ ಅಂತ್ರು ಅದಲ್ಲೆ ಕೇಂಡ್ರಿ ಖುಷಿಯಾತ್ತು. ನಾನು ಗುರುರಾಜ್ ತಂದೆ ಎಂಬೂಕೆ ಹೆಮ್ಮೆಯಾತ್ತು. ಕಷ್ಟಯಿದ್ರು ಮಗ ಏನ್ ಮಾಡಿರೂ ಒಳ್ಳೆಯದಕ್ಕೆ ಮಾಡ್ತಾ ಅಂತ ಗೊತ್ತಿದ್ದೀತು. ಪದಕ ತಪ್ರೋ ಮೂಲಕ ನಮ್ ಹೆಸರು ಎತ್ತರಕ್ಕೆ ಏರ‌್ಸೀದ. ಹೆಮ್ಮಪಡುವ ಮಗ ಇದ್ನಲ್ಲಾ ಎನ್ನೋದು ನಮ್ಮ ಬದುಕಿನ ದೊಡ್ಡ ಹೆಮ್ಮೆಯ ವಿಷಯ ಎನ್ನುತ್ತಾರೆ ಮಹಾಬಲ ಪೂಜಾರಿ.
ಕೋಚ್ ಮಾತು ಪ್ರೇರಣೆಯಾಯ್ತು!: ಜ್ವರಕ್ಕೆ ದೇಹಭಾರ ಕಡಿಮೆ ಆಯಿತು. ಪದೇಪದೆ ಕೈ ಕಾಲಿಗೆ ಅದ ಗಾಯದಿಂದ ಮೂರನೇ ಪ್ರಯತ್ನದ ತನಕ ಪದಕ ನಿರೀಕ್ಷೆಯೇ ಇರಲಿಲ್ಲ. ಆದರೆ ಕೊನೆ ಪ್ರಯತ್ನಕ್ಕೆ ಹೋಗುವ ಮುನ್ನಾ ಗುರು ಇದು ಕೊನೇ ಛಾನ್ಸ್. ನಾಲ್ಕು ವರ್ಷಗಳ ನಿನ್ನ ಪರಿಶ್ರಮ, ನಿನ್ನ ಕನಸು ನಿಮ್ಮವರ ನಿರೀಕ್ಷೆಯ ಕೊನೆಯ ಹಂತದಲ್ಲಿದ್ದೀಯ. ಕೊನೇ ಅವಕಾಶ ಮಿಸ್ ಮಾಡಿಕೊಂಡರೆ ನಾಲ್ಕು ವರ್ಷಗಳ ಪರಿಶ್ರಮ ವ್ಯರ್ಥ ಆಗುತ್ತದೆ. ಎತ್ತಿಬಿಡು ಗುರು ಕೈಚೆಲ್ಲಬೇಡ ಎಂದು ಕೋಚ್ ಹೇಳಿದ ಮಾತು ಸಾಧನೆಗೆ ಪ್ರೇರಣೆ. ಮನೆಯವರ ಹಾರೈಕೆ, ದೇಶವಾಸಿಗಳ ಪ್ರೀತಿ. ಹಿಂದಿನ ಕಾಮನ್‌ವೆಲ್ತ್ ಚಿನ್ನದ ಸಾಧನೆಯ ಹಿನ್ನೆಲೆಯಲ್ಲಿ ಸಮಸ್ತ ಭಾರತೀಯರು ಇಟ್ಟಿದ್ದ ಭರವಸೆ ಕಂಚಿನ ರೂಪದಲ್ಲಿ ಸಾಕಾರಗೊಂಡಿತು ಎಂದು ಗುರುರಾಜ ಮನದಾಳ ಹಂಚಿಕೊಂಡರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈವರೆಗೆ 61 ಕೆ.ಜಿ.ವಿಭಾಗದಲ್ಲಿ ಭಾರತಕ್ಕೆ ಪದಕ ಬಂದಿರಲಿಲ್ಲ. ಪದಕ ಗೆಲ್ಲಬೇಕು ಎನ್ನುವುದು ಕಸಸಾಗಿತ್ತು. ನಾಲ್ಕು ವರ್ಷಗಳಿಂದ ಪರಿಶ್ರಮ ಪಟ್ಟಿದ್ದೆ. ಅನಾರೋಗ್ಯ ನನ್ನ ಕಂಗೆಡಿಸಿತ್ತು. ಕೊನೆಗೂ ಕಂಚು ದೊರೆತಾಗ ದೇಶಕ್ಕಾಗಿ ಪದಕ ಪಡೆಯುವ ಜತೆಗೆ ಮೊದಲ ಬಾರಿ ದೇಶಕ್ಕೆ 61ಕೆ.ಜಿ.ವಿಭಾಗದಲ್ಲಿ ಪದಕ ಸಿಕ್ಕಿದೆ ಎನ್ನುವ ಹೆಮ್ಮೆಯಿದೆ. ಛಲ, ನಿರಂತರ ಅಭ್ಯಾಸ, ಏಕಾಗ್ರತೆ, ದೈಹಿಕ ಕ್ಷಮತೆ ಕಾಪಾಡಿಕೊಂಡರೆ ಸಾಧನೆ ಸಾಧ್ಯ.
- ಗುರುರಾಜ ಪೂಜಾರಿ ಕಂಚಿನ ಪದಕ ವಿಜೇತ
ಪದಕ ಗೆಲ್ಲಬೇಕು ಎನ್ನುವುದು ನಮ್ಮ ಕನಸಾಗಿತ್ತು. ಕಾಮನ್‌ವೆಲ್ತ್ ಪದಕವನ್ನು ನನಗೆ ಅರ್ಪಿಸಿರುವುದು ಖುಷಿಯ ವಿಷಯ. ಶ್ರದ್ಧೆ, ಪರಿಶ್ರಮ, ಗುರಿ ಮುಟ್ಟುವ ಛಲದಿಂದ ಸಾಧನೆ ಸಾಧ್ಯವಾಗಿದೆ.
ಸೌಜನ್ಯಾ ಗುರುರಾರ ಅವರ ಪತ್ನಿ
ಶಾಲೀಗೆ ಹೋತಿದ್ದ ಬತ್ತೀದ. ಅದೆಂತದೋ ಆಡ್ತ ಎಂತಿದ್ರು ಅದು ಎಂತ ಅಂತ ಗೊತ್ತಿರ್ತಿಲ್ಲೆ. ಆರೆ ನಿಮ್ ಮಗ ಭಯಂಕರ ಭಾರ ಎತ್ತ ಮಾರ‌್ರೆ ಅಂತಿದ್ರು. ಸ್ಪರ್ಧೆ ಗಿರ್ದೆಗೆ ಹೋತಾ ಅಂತಗತ್ತಿರ‌್ಲಿಲ್ಲೆ. ಮೊದಲು ಬೆಳ್ಳಿ ಪದಕ ತೆಂಕ್ಕಬಂದಾಗ ಮಗ ಅಡ್ಡಿಲ್ಲೆ ಎಂತಾರು ಮಾಡ್ತಾ ಅಂತಾ ಗೊತ್ತಾತು. ಈಗ ಮತ್ತೆ ಕಂಚಿನ ಪದಕ ತೆಕ್ಕಾಬಂದೀದ ಖುಷಿಯಾತ್ತೆ. ಮಕ್ಕಳನ್ನ ಎಲ್ಲರೂ ಹೊಗ್‌ಳ್ತಾ ಇದ್ರೆ, ಪ್ರೈಜ್ ಗೀಜ್ ತೆಕ್ಕಾಬಂದ್ರೆ ಯಾರಿಗೆ ಖುಷಿ ಆತಿಲ್ಲೆ ಹೇಳೀನಿ. ಕಷ್ಟೂ ಇದ್ದೀತು ಆರೆ ಮಗ ಏನ್ ಮಾಡ್ಕು ಅಂದ್ರು ಅಡ್ಡಿಪಿಸಿದ್ದೇ ಇಲ್ಲ್ಯೆ.
ಪದ್ದು ಗುರುರಾಜ ಅವರ ತಾಯಿ