ಕುಂದಾನಗರಿಗೆ ಕಾಲಿಟ್ಟ ಕರೊನಾ

3MANJY5A-Web
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈಲ್ವೆ ಖಾತೆ ರಾಜ್ಯಸಚಿವ ಸುರೇಶ ಅಂಗಡಿ ನೇತೃತ್ವದಲ್ಲಿ ಸಭೆ ಜರುಗಿತು. ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ಐಜಿಪಿ ರಾಘವೇಂದ್ರ ಸುಹಾಸ್, ಪಾಲ್ಗೊಂಡಿದ್ದರು.
Published on

ಬೆಳಗಾವಿ: ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ 11 ದಿನಗಳ ಬಳಿಕ ಮಹಾಮಾರಿ ಕರೊನಾ ಕುಂದಾನಗರಿಗೆ ಕಾಲಿಟ್ಟಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.

ಬೆಳಗಾವಿಯಲ್ಲಿ ಇಲ್ಲಿಯವರೆಗೆ ಕರೊನಾ ವೈರಸ್ ವರದಿ ಒಂದೂ ಪಾಸಿಟಿವ್ ಬಂದಿರಲಿಲ್ಲ ಎಂಬ ಖುಷಿಯಲ್ಲಿ ಬೆಳಗಾವಿ ಜನತೆ ತಮ್ಮ ಮನೆಗಳಲ್ಲಿ ನೆಮ್ಮದಿಯಿಂದ ಇದ್ದರು. ಆದರೆ, ಶುಕ್ರವಾರ ಬೆಳಗ್ಗೆಯಿಂದ ಬೆಳಗಾವಿಯಲ್ಲಿ ಮೂವರಿಗೆ ಕರೊನಾ ವೈರಸ್ ಇದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ, ಜಿಲ್ಲೆಯ 55 ಲಕ್ಷ ಜನತೆಯಲ್ಲಿ ಭಯ ಹುಟ್ಟು ಹಾಕಿದೆ.

ಖಚಿತ ಪಡಿಸಿದ ಸರ್ಕಾರ: ಬೆಳಗಾವಿ ನಗರದ ಕಾಂಟೋನ್ಮೆಂಟ್ ಪ್ರದೇಶ, ಬೆಳಗಾವಿ ತಾಲೂಕಿನ ಬೆಳಗುಂದಿ ಮತ್ತು ಹಿರೇಬಾಗೇವಾಡಿ ಗ್ರಾಮದ ವ್ಯಕ್ತಿಗೆ ಕರೊನಾ ವೈರಸ್ ತಗುಲಿರುವುದನ್ನು ರಾಜ್ಯ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಸರ್ಕಾರದ ಈ ವರದಿ ಆಧರಿಸಿ ಪಾಸಿಟಿವ್ ಬಂದಿರುವ ಈ ಮೂರು ಪ್ರದೇಶಗಳ 3 ಕಿ.ಮೀ. ಅಂತರದಲ್ಲಿ ಸಂಪೂರ್ಣವಾಗಿ ಸಂಚಾರ ನಿಷೇಧಿಸಲಾಗಿದೆ. ಜತೆಗೆ 2 ಕಿ.ಮೀ. ಅಂತರವನ್ನು ಬಪರ್ ರೆನ್ ಎಂದು ಘೋಷಣೆ ಮಾಡಲಾಗುತ್ತಿದೆ. ಹೀಗಾಗಿ ಇನ್ನುಳಿದ ತಾಲೂಕಿನ ಜನತೆ ಸದ್ಯ ನಿಟ್ಟುಸಿರು ಬಿಡುವಂತಾಗಿದೆ.

ಮುಸ್ಸಂಜೆಯಲ್ಲಿ ಸಭೆ: ಬೆಳಗಾವಿಯಲ್ಲಿ ಮೂರು ಜನರಿಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ನಗರ ಪೊಲೀಸ್ ಆಯುಕ್ತ, ಜಿಲ್ಲಾ ಪೊಲೀಸ್ ಇಲಾಖೆ, ಜಿಪಂ ಸಿಇಒ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ
ಡಾ. ಪ್ರಭಾಕರ ಕೋರೆ ಅವರು ಶುಕ್ರವಾರ ಮುಸ್ಸಂಜೆ ಸಭೆ ನಡೆಸಿದರು. ಮತ್ತೆ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ನಿರ್ದೇಶನಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜತೆಗೆ ದರ್ಬಾರ್ ಗಲ್ಲಿ, ಖಡಕ್ ಗಲ್ಲಿ, ಕಸಾಯಿ ಗಲ್ಲಿ, ಅಜಂನಗರ, ಕ್ಯಾಂಪ್, ಗಾಂಧಿನಗರ, ಹಳೇ ಗಾಂಧಿನಗರ ಪ್ರದೇಶಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ, ಐಜಿಪಿ ರಾಘವೇಂದ್ರ ಸುಹಾಸ್, ಎಸ್ಪಿ ಲಕ್ಷ್ಮಣ ನಿಂಬರಗಿ ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ ಅವರು ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿ 718 ಜನರ ಮೇಲೆ ನಿಗಾ

ಈಗಾಗಲೇ ಜಿಲ್ಲೆಯಲ್ಲಿ 718 ಜನರ ಮೇಲೆ ನಿಗಾ ವಹಿಸಿರುವ ಜಿಲ್ಲಾಡಳಿತ 175 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿದೆ. ಅಲ್ಲದೆ, ನಿಜಾಮುದ್ದೀನ್ ತಬ್ಲಿಘಿ ಧಾರ್ಮಿಕ ಶಿಬಿರದಲ್ಲಿ ಭಾಗವಹಿಸಿ ಆಗಮಿಸಿರುವ 33 ಜನರನ್ನು ನಗರದ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆಗೆ ಇಡಲಾಗಿದೆ. ಇಲ್ಲಿಯವರೆಗೆ 68 ಜನರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರಲ್ಲಿ 27 ಜನರ ನೆಗಟಿವ್ ವರದಿ ಬಂದಿರುವ ಬೆನ್ನಲ್ಲೇ ಮೂವರಿಗೆ ಪಾಸಿಟಿವ್ ವರದಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net