

ವಿಜಯವಾನಿ ಸುದ್ದಿಜಾಲ ಕುಂದಾಣ
ಮಕ್ಕಳ ಶಿಕ್ಷಣದ ಜತೆಗೆ ಪ್ರತಿ ವರ್ಷ ಕಲೆ, ಸಾಹಿತ್ಯ, ಮನರಂಜನೆ, ಸ್ಪರ್ಧೆ ನಡೆಸಿ ಅವರಲ್ಲಿಡಗಿರುವ ಪ್ರತಿಭೆಯನ್ನು ಗುರುತಿಸಿ, ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಆಯೋಜಿಸಲಾಗುತ್ತಿದೆ ಎಂದು ಕೊಯಿರಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಶ್ರೀನಿವಾಸ್ ಹೇಳಿದರು.
ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಕೊಯಿರಾದಲ್ಲಿ ಆಯೋಜಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಡಿ 2023-24ನೇ ಸಾಲಿನ ಕೊಯಿರಾ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಜತೆಗೆ ಬಿಸಿಯೂಟ, ಸಮವಸ್ತ್ರ, ವಿದ್ಯಾರ್ಥಿ ವೇತನ, ಬೈಸಿಕಲ್, ಪಠ್ಯಪುಸ್ತಕ ಉಚಿತ ನೀಡಲಾಗುತ್ತಿದೆ. ಪಾಲಕರಿಗೆ ಶಿಕ್ಷಣದ ವೆಚ್ಚ ಹೊರೆಯಲಾಗಬಾರದು ಮತ್ತು ಕುಟುಂಬದ ನಿರ್ವಹಣೆ ಬಡತನ ರೇಖೆ ತಡೆಯುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ ಎಂದರು.
ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆದರ್ಶ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಆಶುಭಾಷಣ ಸ್ಪರ್ಧೆ, ಧಾರ್ಮಿಕ ಪಠಣ, ಕಥೆಗಳು, ಚಿತ್ರಕಲೆ, ಅಭಿನಯಗೀತೆ, ಭಕ್ತಿಗೀತೆ, ಜಾನಪದ ಗೀತೆ, ಭರತನಾಟ್ಯ, ಯೋಗ, ನೀತಿಕಥೆ, ಪೌರಾಣಿಕ ಕಥೆ ಸೇರಿ ಹಲವು ಸ್ಪರ್ಧೆ ನಡೆಸಲಾಗುತ್ತದೆ. ಶ್ರದ್ಧೆಯಿಂದ ಸ್ಪರ್ಧಿಸುವ ಮಕ್ಕಳನ್ನು ಗುರುತಿಸಿ ಪಾರಿತೋಷಕ ನೀಡಿ ಗೌರವಿಸಲಾಗುತ್ತದೆ ಎಂದರು.
ಉಪಾಧ್ಯಕ್ಷೆ ಮಮತಾ ಶಿವಾಜೀ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆ ನಡೆಸುವ ಸಂಬಂಧ ಕೊಯಿರಾ ಪಂಚಾಯಿತಿಯಲ್ಲಿ ವಿಷೇಶ ಅನುದಾನ ಮೀಸಲಿದೆ. ಗ್ರಾಮೀಣ ಮಕ್ಕಳ ಪ್ರತಿಭೆ ಉತ್ತುಂಗಕ್ಕೆರಲು ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸ್ಪರ್ಧೆ ಮಾಡಿ ಅವರ ಕ್ರೀಯಾಶೀಲ ಪ್ರತಿಭೆಯನ್ನು ದೊಡ್ಡ-ದೊಡ್ಡ ಸಭೆ, ಸಮಾರಂಭಗಳಲ್ಲಿ ಪ್ರದರ್ಶನ ಮಾಡುವುದರಿಂದ ಅವರ ಸಾಧನೆ ಮೆಟ್ಟಿಲಿಗೆ ಸಂಪೂರ್ಣ ಸಹಕಾರ ನೀಡಲು ಬದ್ಧರಿದ್ದೇವೆ ಎಂದರು.
ಸದಸ್ಯರಾದ ಆಂಜಿನಮ್ಮ, ನಯನಾ ಆನಂದ್, ಮುನೀಂದ್ರ, ಎಸ್‌ಡಿಎಂಸಿ ಅಧ್ಯಕ್ಷ ಮುನೇಗೌಡ, ಸಿಆರ್‌ಪಿ ಅಧಿಕಾರಿಗಳಾದ ಕೃಷ್ಣರಾಮ್, ಚಂದ್ರಶೇಖರ್, ನಾಗರಾಜು, ಯತೀಶ್, ಪದ್ಮಾವತಿ, ನಾಗೇಶ್ ಇದ್ದರು.