

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕಿನ ಪ್ರಸಿದ್ಧ ಐತಿಹಾಸಿಕ ತಾಣವೆಂದೇ ಗುರುತಿಸಿಕೊಂಡಿರುವ ಕುಂದಾಣ ಏಕಶಿಲಾ ಬೆಟ್ಟಕ್ಕೆ ಕಾಯಕಲ್ಪ ಸಿಗುವುದೇ?, ಜಿಲ್ಲೆಯ ಜನರ ಬಹುದಿನದ ಬೇಡಿಕೆಗೆ ರಾಜ್ಯ ಸರ್ಕಾರ ಮಣೆ ಹಾಕಲಿದೆಯೇ?
ದೇವನಹಳ್ಳಿ ಪಾಳೆಗಾರರ ಕಾಲದ್ದು ಎನ್ನುವ ಅಳಿಲಿನ ಆಕಾರದಲ್ಲಿರುವ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಈ ಹಿಂದಿನ ಬಿಜೆಪಿ ಸರ್ಕಾರ 2.30 ಕೋಟಿ ರೂ.ಅನುದಾನ ಮಂಜೂರು ಮಾಡಿತ್ತು. ಬೆಟ್ಟದಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಕೈಗೆತ್ತಿಕೊಳ್ಳುವ ಸಲುವಾಗಿ ಕೆಆರ್‌ಐಡಿಎಲ್ ಸಂಸ್ಥೆ ನೀಲಿನಕ್ಷೆ ಸಿದ್ಧಪಡಿಸಿ ಕಾಮಗಾರಿ ಆರಂಭಿಸಲು ಮುಂದಾಗಿತ್ತು. ಆದರೆ ಪ್ರಸ್ತುತ ರಾಜ್ಯ ಸರ್ಕಾರ ಈ ಹಿಂದೆ ಅನುಮೋದನೆಗೊಂಡ ಕೆಲವೊಂದು ಕಾಮಗಾರಿಗಳಿಗೆ ತಡೆಯೊಡ್ಡಿರುವ ಕಾರಣದಿಂದ ಕುಂದಾಣ ಬೆಟ್ಟದ ಕಾಯಕಲ್ಪಕ್ಕೂ ಕೊಕ್ಕೆ ಬಿದ್ದಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಿಲ್ಲದ ಕಾರಣ ಸಂಸ್ಥೆಯೂ ಕಾದುನೋಡುವ ಸ್ಥಿತಿಯಲ್ಲಿದೆ.
ಐತಿಹಾಸಿಕ ತಾಣ: ದೇವನಹಳ್ಳಿ ತಾಲೂಕಿನ ಹಲವು ಐತಿಹಾಸಿಕ ತಾಣಗಳಿದ್ದು, ಅವುಗಳ ಪೈಕಿ ಕುಂದಾಣ ಏಕಶಿಲಾ ಬೆಟ್ಟ ಪ್ರಮುಖವಾಗಿದೆ. ಇಂದಿಗೂ ತಾಲೂಕಿನ ಹಲವು ಕಡೆಗಳಲ್ಲಿ ನಡೆಯುತ್ತಿರುವ ಉತ್ಖನನಗಳಲ್ಲಿ ಹಲವು ಕುರುಹುಗಳೂ ಪತ್ತೆಯಾಗುತ್ತಿವೆ.
ಪರಿಷ್ಕೃತಗೊಂಡ ಯೋಜನೆ: ದೇವನಹಳ್ಳಿ ಕೋಟೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ 2.30 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲು ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಯಮಿತದ ಮೂಲಕ ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸಲು ಸರ್ಕಾರ ಅನುಮೋದನೆ ನೀಡಿತ್ತು. ಕಾಮಗಾರಿಗಾಗಿ ಮೊದಲ ಕಂತಿನಲ್ಲಿ ಕೆಟಿಐಎಲ್ ಸಂಸ್ಥೆಗೆ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ನಂತರದಲ್ಲಿ ದೇವನಹಳ್ಳಿ ಶಾಸಕರಾಗಿದ್ದ ನಿಸರ್ಗ ನಾರಾಯಣಸ್ವಾಮಿ ಅವರ ಮನವಿಯಂತೆ ಈ ಯೋಜನೆಯನ್ನು ಮಾರ್ಪಾಡಿಸಿ ದೇವನಹಳ್ಳಿ ತಾಲೂಕಿನ ಕುಂದಾಣ ಬೆಟ್ಟದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಾಗಿ 2.30 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಕೆಆರ್‌ಐಡಿಎಲ್ ಮೂಲಕ ಅನುಷ್ಠಾನಗೊಳಿಸಲು ಪರಿಷ್ಕೃತ ಮಂಜೂರಾತಿ ನೀಡಲಾಗಿತ್ತು.
ವಿಶೇಷತೆ ಏನು? ದೇವನಹಳ್ಳಿ ಪಶ್ಚಿಮಕ್ಕೆ 10 ಕಿ.ಮೀ. ದೂರದಲ್ಲಿರುವ ಕುಂದಾಣ ಬಳಿ ಇರುವ ಏಕಶಿಲಾ ಬೆಟ್ಟ ನೋಡಲು ಅಳಿಲಿನ ಆಕಾರದಲ್ಲಿದೆ. 61 ಮೀಟರ್ ಎತ್ತರವಿದ್ದು, ಬೆಟ್ಟದ ತುದಿ ಸುಮಾರು 100 ಮೀಟರ್ ಅಗಲ 50 ಮೀಟರ್ ಉದ್ದವಿದ್ದು ಸಮತಟ್ಟಾಗಿದೆ. ಬೆಟ್ಟದ ಪೂರ್ವ ಭಾಗದಲ್ಲಿ ಇಳಿಜಾರು ದಾರಿಯಿದ್ದು, ನಾಲ್ಕು ಕಲ್ಲಿನ ಕಂಬದೊಂದಿಗೆ ಪ್ರವೇಶ ದ್ವಾರವಿದೆ. ದೇವನಹಳ್ಳಿ ಪಾಳೆಗಾರರ ಕಾಲದ ಚನ್ನರಾಯಸ್ವಾಮಿ ದೇವಾಲಯ ಹಾಗೂ ಆಂಜನೇಯಸ್ವಾಮಿ ದೇವಾಲಯಗಳು ಇವೆ. ಕುಂದಾಣ 13ನೇ ಶತಮಾನದ ಅಂತ್ಯಭಾಗದಲ್ಲಿ ಹೊಯ್ಸಳ ರಾಮನಾಥನ ರಾಜಧಾನಿಯಾಗಿತ್ತು ಎಂಬ ಐತಿಹ್ಯವಿದೆ. ಪ್ರಸ್ತುತ ಎರಡೂ ದೇಗುಲಗಳಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ ಜಾತ್ರೆಯಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ವಾರಾಂತ್ಯದಲ್ಲಿ ಪ್ರವಾಸಿಗರು ಭೇಟಿ ನೀಡುವ ಮೆಚ್ಚಿನ ಪ್ರವಾಸಿ ತಾಣವಾಗಿದೆ. ಏಕಶಿಲಾ ಬೆಟ್ಟವಾದ ಈ ಸ್ಥಳದಲ್ಲಿ ನಿಂತರೆ ಸುತ್ತಲಿನ ಪ್ರಕೃತಿ ವೀಕ್ಷಣೆಯ ಮೋಜು ಮಾಡಬಹುದು. ವಿದೇಶಿ ಪ್ರವಾಸಿಗರನ್ನೂ ಆಕರ್ಷಿಸುತ್ತಿರುವ ಈ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಯಾವ ಸ್ಪಂದಿಸಲಿದೆ ಎಂಬುದನ್ನು ಪ್ರವಾಸಿ ಪ್ರಿಯರು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಪ್ರಮುಖ ಕಾಮಗಾರಿಗಳೇನು? ಬೆಟ್ಟದಲ್ಲಿ ಪ್ರವಾಸಿಗರಿಗೆ ಸುಸಜ್ಜಿತ ಶೌಚಗೃಹ ನಿರ್ಮಿಸುವುದು, ಬೆಟ್ಟಕ್ಕೆ ಸಾಗುವ ದಾರಿಯಲ್ಲಿ ಎರಡೂ ಕಡೆ ತಡೆಗೋಡೆ ನಿರ್ಮಿಸುವುದು, ಪ್ರವಾಸಿಗರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಬೆಟ್ಟದ ಸುತ್ತಲೂ ಸೋಲಾರ್ ದೀಪ ಅಳವಡಿಕೆ, ಬುದ್ಧ ವಿಹಾರದ ಬಳಿ ಕಾಂಕ್ರಿಟ್ ರಸ್ತೆ ಸೇರಿ ಕುಡಿವ ನೀರು ಮತ್ತಿತರ ಸೌಲಭ್ಯ ಒದಗಿಸುವುದು.
ಕುಂದಾಣ ಏಕಶಿಲಾ ಬೆಟ್ಟದಲ್ಲಿ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅನುಮೋದನೆ ನೀಡಿತ್ತು. ಅದರಂತೆ ಕೆಆರ್‌ಐಡಿಎಲ್ ಸಂಸ್ಥೆ ಮೂಲಕ ಕಾಮಗಾರಿ ಆರಂಭಿಸುವ ಸಿದ್ಧತೆ ನಡೆದಿತ್ತು. ಆದರೆ ಪ್ರಸ್ತುತ ರಾಜ್ಯ ಸರ್ಕಾರ ಈ ಹಿಂದೆ ಅನಮೋದನೆಗೊಂಡ ಕಾಮಗಾರಿಗಳನ್ನು ನಡೆಸದಂತೆ ತಡೆಹಿಡಿದಿರುವುದರಿಂದ ಸದ್ಯಕ್ಕೆ ಕಾಮಗಾರಿ ಆರಂಭಿಸಲು ಅವಕಾಶವಿಲ್ಲ. ಸರ್ಕಾರದ ಆದೇಶದ ಮೇಲೆಗೆ ಮುಂದಿನ ಕ್ರಮಕೈಗೊಳ್ಳಲಾಗುವುದು.
ಚೆಲುವಾಂಬ, ಉಪನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ