ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ

kundana gp election
Published on

ವಿಜಯವಾಣಿ ಸುದ್ದಿಜಾಲ ಕುಂದಾಣ
ಗ್ರಾಪಂ ಅಭಿವೃದ್ಧಿಗೆ ಮತ್ತು ಗ್ರಾಮಸ್ಥರ ಸೇವೆ ಮಾಡಲು ಅವಕಾಶ ಲಭಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್ ಹೇಳಿದರು.
ದೇವನಹಳ್ಳಿ ತಾಲೂಕಿನ ಕುಂದಾಣ ಪಂಚಾಯಿತಿಯಲ್ಲಿ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ವಾಟರ್ ಟ್ಯಾಂಕ್‌ಗಳಿಗೆ ಅನುದಾನ, ಸಿಎಸ್‌ಆರ್ ಗ್ರಾಂಟ್‌ನಿಂದ ಶಾಲೆಗಳ ನಿರ್ಮಾಣ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಯಿಂದ ಗ್ರಾಮೀಣ ರಸ್ತೆಗಳಲ್ಲಿ ಡಾಂಬರು ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿಗಳ ನಿರ್ಮಾಣಕ್ಕೆ 50 ಕೋಟಿ ರೂ.ವರೆಗೂ ಅನುದಾನ ತಂದು ಅಭಿವೃದ್ಧಿ ಮಾಡಲಾಗಿದೆ. ಜತೆಗೆ ತಿಂಡ್ಲು, ಕನ್ನಮಂಗಲದಲ್ಲಿ ಪಶು ಆಸ್ಪತ್ರೆ ಮಂಜೂರು ಮಾಡಿಸಲಾಗಿದೆ. ನಮ್ಮ ವ್ಯಾಪ್ತಿಗೆ ಬರುವ ಎಲ್ಲರೂ ಪಕ್ಷಭೇದ ಮರೆತು ಅಭಿವೃದ್ಧಿಗೆ ಶ್ರಮಿಸಲಾಗಿದೆ. ತಮ್ಮ ಗ್ರಾಪಂಗಳ ಆದಾಯ ಮೂಲಗಳ ಕೊರತೆ ನೀಗಿಸಲು ವಾಣಿಜ್ಯ ಮಳಿಗೆಗಳ ನಿರ್ಮಾಣ, ತೆರಿಗೆ ಸಂಗ್ರಹಗಳಿಗೆ ಉತ್ತೇಜನ ನೀಡುವಂತೆ ಸಲಹೆ ನೀಡಿದರು.
ಖಾದಿ ಬೋರ್ಡ್ ಮಾಜಿ ಅಧ್ಯಕ್ಷ ನಾಗೇಗೌಡ ಮಾತನಾಡಿ, ಜಿಲ್ಲಾಡಳಿತ ಕಚೇರಿ ತಮ್ಮ ಪಂಚಾಯಿತಿಗೆ ಸಮೀಪವಿದ್ದು, ಈ ಭಾಗ ಸಾಕಷ್ಟು ಅಭಿವೃದ್ಧಿ ಹೊಂದಬೇಕಿದೆ. ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿ ವಿಶೇಷ ಪ್ಯಾಕೇಜ್ ಬಿಡುಗಡೆಗೆ ಮನವಿ ಸಲ್ಲಿಸಲಾಗುವುದು. ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿ ಹೊಂದಿದರೆ ಮಾತ್ರ ಮುಂಬರುವ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಜನ ಬೆಂಬಲ ದೊರೆಯಲು ಸಾಧ್ಯ ಎಂದರು.
ಗ್ರಾಪಂ ಸದಸ್ಯರಾದ ನಾರಾಯಣಸ್ವಾಮಿ, ಕೆ.ವಿ.ಸ್ವಾಮಿ, ಸೂಲಕುಂಟೆ ವೀಣಾರಾಣಿ ನವೀನ್‌ಕುಮಾರ್, ಮುನಿಯಪ್ಪ, ದೇವಗಾನಹಳ್ಳಿ ಕ್ಯಾತೇಗೌಡ, ಕುಂದಾಣ ಪ್ರವೀಣ್, ಪಿಡಿಒ ಪದ್ಮನಾಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net