

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದ ಅಡಿಯಲ್ಲಿ ಸೆ.26ರಿಂದ ಅ.2ರವರೆಗೆ ಸಯ್ಯಜಿರಾವ್ ರಸ್ತೆಯ ಕಾವೇರಿ ಎಂಪೋರಿಯಂ ಬಳಿಯ ಆವರಣದಲ್ಲಿ ಕುಂದಣ ಕಲೆ ಪ್ರದರ್ಶನ ಆಯೋಜಿಸಲಾಗಿದೆ.
ಕುಂದಣ ಕಲೆಯನ್ನು ಮಹಾರಾಜರು ಪರಿಚಯಿಸಿದರು. ಆ ಕಲೆಯನ್ನು ಮುಂದುವರಿಸುವ ಸಲುವಾಗಿ ಚಾಮರಾಜ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಆದರೆ, ಸಂಸ್ಥೆಯು ಪ್ರಚಾರ ಸಿಗದೆ ವಿದ್ಯಾರ್ಥಿಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಹೋನ್ನತ ಕಲೆಯನ್ನು ಮತ್ತೆ ಮುನ್ನ್ನೆಲೆಗೆ ತರುವ ಉದ್ದೇಶದಿಂದ ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕರಕುಶಲ ಕರ್ಮಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಅಶೋಕ್ ತಿಳಿಸಿದರು.
ನಗರದಲ್ಲಿ ಈ ಹಿಂದೆ ಸುಮಾರು 13 ಸಾವಿರ ಕರಕುಶಲ ಕರ್ಮಿಗಳು ಇದ್ದರು. ಆದರೆ, ಈಗ ಚೈನಾದ ಕರಕುಶಲ ವಸ್ತುಗಳ ಆಮದು, ಕರೊನಾ ಸಂಕಷ್ಟ ಮೊದಲಾದ ಕಾರಣಗಳಿಂದಾಗಿ 1,200ಕ್ಕೆ ಇಳಿದಿದೆ ಎಂದರು. ಪದಾಧಿಕಾರಿಗಳಾದ ವೆಂಕಟೇಶ್, ಲಕ್ಷ್ಮೀ, ಕೃಷ್ಣಮೂರ್ತಿ, ಮುರುಗೇಶ್ ಇದ್ದರು.