ಕುಂದಗೋಳ ತಾಲೂಕು ಆಸ್ಪತ್ರೆ ಲಕಲಕ!

clean
Published on

ಕುಂದಗೋಳ: ತಾಲೂಕು ಆಸ್ಪತ್ರೆ ಶುಕ್ರವಾರ ಲಕಲಕ ಹೊಳೆಯುತ್ತಿತ್ತು. ಧೂಳು, ಕೊಳೆಯಿಂದ ವಿಕಾರವಾಗಿ ಕಾಣುತ್ತಿದ್ದ ಆಸ್ಪತ್ರೆ ಗೋಡೆಗಳು, ನೆಲವನ್ನು ಶುಕ್ರವಾರ ಕಸಗುಡಿಸಿ ನೀರಿನಿಮದ ಒರೆಸಲಾಯಿತು!.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಆಸ್ಪತ್ರೆಗೆ ಭೇಟಿ ನೀಡುತ್ತಾರೆ ಎನ್ನುವ ಮಾಹಿತಿ ಸಿಗುತ್ತಿದ್ದಂತೆಯೇ ಆಸ್ಪತ್ರೆ ಸಿಬ್ಬಂದಿ ದಡಬಡಾಯಿಸಿ ಸ್ವಚ್ಛತೆ ಕಾರ್ಯ ಕೈಗೊಂಡು. ಗೋಡೆಗಳ ಜೀಡು, ಧೂಳು ಸ್ವಚ್ಛಗೊಳಿಸಲಾಯಿತು.

ನೀರಿನಿಂದ ನೆಲ ಒರೆಸಿ ಅಂದಗಾಣಿಸಲಾಯಿತು. ಇದೆಲ್ಲವನ್ನು ಕಂಡು ಆಶ್ಚರ್ಯಚಕಿತರಾದ ರೋಗಿಗಳು ಹಾಗೂ ಸಂಬಂಧಿಕರು. ‘ಮಿನಿಸ್ಟರ್ ಬರ್ತಾರೆ ಅಂತಾ ಸುದ್ದಿ ಕೇಳಿ ಹೀಗೆ ಒಂದು ದಿನ ಮಾತ್ರ ಆಸ್ಪತ್ರೆಯನ್ನು ಸ್ವಚ್ಛವಾಗಿಡುವುದು ಸರಿಯಲ್ಲ. ನಿತ್ಯವೂ ಸ್ವಚ್ಛತಾ ಕಾರ್ಯ ಕೈಗೊಂಡು ಆಸ್ಪತ್ರೆಯಲ್ಲಿ ಆರೋಗ್ಯಪೂರ್ಣ ವಾತಾವರಣ ಇರುವಂತೆ ನೋಡಿಕೊಳ್ಳಬೇಕು’ ಎಂದು ಗ್ರಾಮಸ್ಥರಾದ ಯಲಮ್ಮ, ದಾನಪ್ಪ, ಶೇಖಣ್ಣ, ಮಂಜುನಾಥ ಮತ್ತಿತರರು ಒತ್ತಾಯಿಸಿದರು.

ಅದೇ ರೀತಿ ಹಿರೇನೇರ್ತಿಬೆನಕನಹಳ್ಳಿ ಮಾರ್ಗದ ಬೆಣ್ಣಿ ಹಳ್ಳ ಪಕ್ಕದ ರಸ್ತೆ ಭಾಗವನ್ನೂ ಜೆಸಿಬಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಉಳಿದ ದಿನವೂ ಆಯಾ ಗ್ರಾಪಂ ನವರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net