

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಜನವರಿ 26 ರಿಂದ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯು ಕುಂದಗೋಳ ತಾಲೂಕಿನ ಸಂಶಿ ಗ್ರಾಮಕ್ಕೆ ಪ್ರವೇಶಿಸುವ ಮೂಲಕ 100 ನೇ ಗ್ರಾಮಕ್ಕೆ ಕಾಲಿಟ್ಟಂತೆ ಆಗಿದೆ.
ಮಹಿಳೆಯರ ಡೊಳ್ಳು ಕುಣಿತ, ಮುತೆôದೆಯರ ಕುಂಭಮೇಳ, ಸೇವಾದಳ, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ, ಜೈ ಭೀಮ್ ಜೈ ಅಂಬೇಡ್ಕರ್ ಕುರಿತಾದ ಜಯಘೊಷಗಳನ್ನು ಸಾರ್ವಜನಿಕರು ಕೂಗಿದರು. ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಯು ಗಮನ ಸೆಳೆಯಿತು. ಶಾಲಾ ವಿದ್ಯಾರ್ಥಿಗಳು ನೃತ್ಯ, ಹಾಡುಗಳನ್ನು ಹಾಡಿದರು. ರಸ್ತೆಗಳಲ್ಲಿ ಚಿತ್ತಾಕರ್ಷಕವಾಗಿ ರಂಗೋಲಿಗಳನ್ನು ಬಿಡಿಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮೀನಾಕ್ಷಿ ಗುದಗಿಯವರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಮೆಣಸಿನಕಾಯಿ, ಸಂಶಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೀವ ಪುಟ್ಟಣ್ಣವರ, ಉಪಾಧ್ಯಕ್ಷೆ ಗೌರಮ್ಮ ಹರಕುಣಿ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗಿರೀಶ ಅಮರಗೊಂಡ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮುಖಂಡರು, ಶಿಶು ಅಭಿವೃದ್ಧಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.